ರಶೀದ್ ಆಲ್‌ರೌಂಡ್ ಆಟ: ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ ಮೇಲುಗೈ

Update: 2019-09-07 04:11 GMT

ಚಿತ್ತಗಾಂಗ್, ಸೆ.6: ನಾಯಕ ರಶೀದ್ ಖಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೂಲ್ಯ ಕೊಡುಗೆ ನೀಡುವ ಮೂಲಕ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಮೇಲುಗೈ ಒದಗಿಸಿಕೊಟ್ಟಿದ್ದಾರೆ.

61 ಎಸೆತಗಳಲ್ಲಿ 51 ರನ್ ಗಳಿಸಿದ ರಶೀದ್ ಅಫ್ಘಾನ್ ತಂಡ ಮೊದಲ ಇನಿಂಗ್ಸ್‌ನಲ್ಲಿ 342 ರನ್ ಗಳಿಸಲು ನೆರವಾದರು. ಆ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ರಶೀದ್ 47 ರನ್‌ಗೆ 4 ವಿಕೆಟ್ ಉರುಳಿಸಿದರು. ಎರಡನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ 194 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆಯಲ್ಲಿದೆ.

ಬಾಂಗ್ಲಾದೇಶ ಇನಿಂಗ್ಸ್‌ನಲ್ಲಿ ಮೊಮಿನುಲ್ ಹಕ್(52ರನ್, 71 ಎಸೆತ)ಏಕಾಂಗಿ ಹೋರಾಟ ನೀಡಿದರು. ಮೊಸಾಡೆಕ್ ಹುಸೇನ್ ಔಟಾಗದೆ 44 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ.

ಬಾಂಗ್ಲಾ ತನ್ನ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು. ಶಾದ್ಮಾನ್ ಇಸ್ಲಾಮ್ (0) ಯಮಿನ್ ಅಹ್ಮದ್‌ಝೈಗೆ ವಿಕೆಟ್ ಒಪ್ಪಿಸಿದರು. 2ನೇ ವಿಕೆಟ್ ಜೊತೆಯಾಟದಲ್ಲಿ 49 ರನ್ ಗಳಿಸಿದ ಸೌಮ್ಯ ಸರ್ಕಾರ್ ಹಗೂ ಲಿಟನ್ ದಾಸ್ ತಂಡವನ್ನು ಆಧರಿಸಿದರು. ಮುಹಮ್ಮದ್ ನಬಿ ಅವರು ಸೌಮ್ಯರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದರು. ಬೇಗನೆ ಬೌಲಿಂಗ್ ದಾಳಿಗಿಳಿದ ರಶೀದ್ ಅವರು ಲಿಟನ್ ದಾಸ್(33) ವಿಕೆಟನ್ನು ಉರುಳಿಸಿದರು.

ತನ್ನ 5ನೇ ಓವರ್‌ನಲ್ಲಿ ನಾಯಕ ಶಾಕಿಬ್ ಅಲ್ ಹಸನ್(11)ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ರಶೀದ್ ಎರಡು ಎಸೆತಗಳ ಬಳಿಕ ಮುಶ್ಫಿಕುರ್ರಹೀಂ(0)ವಿಕೆಟನ್ನು ಉರುಳಿಸಿದರು. ಆಗ ಬಾಂಗ್ಲಾದೇಶ ಟೀ ವಿರಾಮದ ವೇಳೆಗೆ 88 ರನ್‌ಗೆ 5 ವಿಕೆಟ್ ಕಳೆದುಕೊಂಡಿತು.

ಅತ್ಯಂತ ಕಿರಿಯ ವಯಸ್ಸಿನ ಟೆಸ್ಟ್ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಶೀದ್ ಉತ್ತಮ ದಾಳಿ ಮುಂದುವರಿಸಿ, ಮಹಮ್ಮದುಲ್ಲಾ ರಿಯಾದ್‌ರನ್ನು 7 ರನ್‌ಗೆ ಪೆವಿಲಿಯನ್‌ಗೆ ಕಳುಹಿಸಿ ಬಾಂಗ್ಲಾದ ಸಂಕಷ್ಟ ಹೆಚ್ಚಿಸಿದರು. ಪ್ರತಿದಾಳಿ ನಡೆಸಿದ ಮೊಮಿನುಲ್ 69 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ, ಮುಹಮ್ಮದ್ ನಬಿ(2-53) ಬೌಲಿಂಗ್‌ನಲ್ಲಿ ಅಸ್ಘರ್ ಅಫ್ಘಾನ್‌ಗೆ ವಿಕೆಟ್ ಒಪ್ಪಿಸಿದರು. ಮೊಸಾಡೆಕ್ ಬಾಲಂಗೋಚಿ ತೈಜುಲ್ ಇಸ್ಲಾಂ(14)ಜೊತೆ ಕ್ರೀಸ್ ಕಾಯ್ದುಕೊಂಡಿದ್ದಾರೆ.ಅಫ್ಘಾನಿಸ್ತಾನದ ಮೊದಲ ಇನಿಂಗ್ಸ್‌ಗಿಂತ 148 ರನ್ ಹಿನ್ನಡೆಯಲ್ಲಿರುವ ಬಾಂಗ್ಲಾ ಕೈಯಲ್ಲಿ ಕೇವಲ 2 ವಿಕೆಟ್ ಇದ್ದು, ಕಠಿಣ ಸವಾಲು ಎದುರಿಸುತ್ತಿದೆ. ಇದಕ್ಕೂ ಮೊದಲು 5 ವಿಕೆಟ್ ನಷ್ಟಕ್ಕೆ 271 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಅಫ್ಘಾನ್‌ಗೆ ಚೊಚ್ಚಲ ಅರ್ಧಶತಕ ಸಿಡಿಸಿದ ರಶೀದ್ ಆಸರೆಯಾದರು. ಔಟಾಗದೆ 88 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮಾಜಿ ನಾಯಕ ಅಸ್ಘರ್ ನಿನ್ನೆಯ ಸ್ಕೋರ್‌ಗೆ ಕೇವಲ 4 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. 8 ರನ್‌ನಿಂದ ಮೊದಲ ಟೆಸ್ಟ್ ಶತಕ ವಂಚಿತರಾದರು.

ತೈಜುಲ್ ಇಸ್ಲಾಮ್ 41 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ಇನ್ನೋರ್ವ ಬ್ಯಾಟ್ಸ್‌ಮನ್ ಅಫ್ಸರ್ ಝಝೈಗೆ ಪೆವಿಲಿಯನ್ ಹಾದಿ ತೋರಿಸಿದರು. ಶಾಕಿಬ್ ಬಾಲಂಗೋಚಿಗಳಾದ ಅಹ್ಮದ್ ಹಾಗೂ ಯಾಮಿನ್‌ರನ್ನು ಬೇಗನೆ ಔಟ್ ಮಾಡಿದರು. ಈ ನಡುವೆ ರಶೀದ್ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆಫ್ ಸ್ಪಿನ್ನರ್ ಮೆಹಿದಿ ಹಸನ್ ರಿಟರ್ನ್ ಕ್ಯಾಚ್ ಪಡೆದು ರಶೀದ್ ಹೋರಾಟವನ್ನು ಕೊನೆಗೊಳಿಸಿದರು. ತೈಜುಲ್(4-116) ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಾಕಿಬ್ ಹಾಗೂ ಆಫ್ ಸ್ಪಿನ್ನರ್ ನಯೀಮ್ ಹಸನ್ ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News