ರಾಷ್ಟ್ರಪತಿ ಕೋವಿಂದ್ ವಿಮಾನ ಹಾರಾಟಕ್ಕೆ ತನ್ನ ವಾಯು ಮಾರ್ಗ ತೆರೆಯಲು ನಿರಾಕರಿಸಿದ ಪಾಕ್: ವರದಿ

Update: 2019-09-07 18:24 GMT

ಹೊಸದಿಲ್ಲಿ, ಸೆ. 7: ಮುಂದಿನ ವಾರ ಐಸ್‌ಲ್ಯಾಂಡ್‌ಗೆ ತೆರಳಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಯಾಣಿಸಲಿರುವ ಏರ್ ಇಂಡಿಯಾ ವಿಮಾನ ತನ್ನ ಹಾರಾಟ ಪ್ರದೇಶದಲ್ಲಿ ಸಂಚರಿಸಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ. ಇದರಿಂದ ಸೋಮವಾರ (ಸೆಪ್ಟಂಬರ್ 9) ಐಸ್‌ಲ್ಯಾಂಡ್, ಸ್ವಿಝರ್‌ಲ್ಯಾಂಡ್ ಹಾಗೂ ಸ್ಲೋವೇನಿಯಾಕ್ಕೆ ತೆರಳಲು ರಾಷ್ಟ್ರಪತಿ ಪ್ರಯಾಣಿಸುವ ಬೋಯಿಂಗ್ 747 ವಿಮಾನ ದೀರ್ಘವಾದ ಇನ್ನೊಂದು ಮಾರ್ಗದಲ್ಲಿ ಸಂಚರಿಸಲಿದೆ. ಅದೇ ರೀತಿ ರಾಷ್ಟ್ರಪತಿ ಅವರು ಮೂರು ದೇಶಗಳ ಪ್ರವಾಸ ಪೂರ್ಣಗೊಳಿಸಿ ಸೆಪ್ಟಂಬರ್ 17ರಂದು ಇದೇ ಮಾರ್ಗದ ಮೂಲಕ ಹಿಂದಿರುಗಲಿದ್ದಾರೆ. ಈ ನಿರ್ಧಾರಕ್ಕೆ ಪ್ರಧಾನಿ ಇಮ್ರಾನ್ ಖಾನ್ ಅವರು ಅನುಮತಿ ನೀಡಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಶನಿವಾರ ಪಿಟಿವಿಗೆ ತಿಳಿಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ತಿಳಿಸಿವೆ. ನಿಗದಿತವಾಗಿ ಸಂಚರಿಸುವ ವಿಮಾನಗಳು ತಾವು ಯಾವ ದೇಶದ ಹಾರಾಟ ಪ್ರದೇಶದಲ್ಲಿ ಹಾರಾಟ ನಡೆಸುತ್ತವೆಯೋ ಆ ದೇಶದ ಅನುಮತಿಯನ್ನು ಮುಂಚಿತವಾಗಿ ಪಡೆದುಕೊಳ್ಳುತ್ತವೆ.

ವಿಶೇಷ ಹಾಗೂ ಚಾರ್ಟರ್ ವಿಮಾನಗಳು (ನಿಗದಿತವಾಗಿ ಸಂಚರಿಸುವ ವಿಮಾನಗಳಲ್ಲ) ಹಾರಾಟ ಮಾರ್ಗ ಹೊಂದಿರುವ ವಿವಿಧ ದೇಶಗಳಿಂದ ರಾಜತಾಂತ್ರಿಕ ಅನುಮತಿ ಕೋರುತ್ತವೆ. ರಾಷ್ಟ್ರಪತಿ ಅವರ ಯುರೋಪ್ ಪ್ರವಾಸಕ್ಕೆ ಪಾಕಿಸ್ತಾನ ತನ್ನ ಹಾರಾಟ ಪ್ರದೇಶ ಬಳಸಲು ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ಅವರ ವಿಮಾನವು ದಿಲ್ಲಿ-ಮುಂಬೈ ಸಮೀಪ-ಅರೇಬಿ ಸಮುದ್ರ-ಮಸ್ಕತ್- ಅನಂತರ ಯುರೋಪ್‌ಗೆ ತೆರಳಲು ಹಾಗೂ ಹಿಂದಿರುಗಲು 50 ನಿಮಿಷ ಹೆಚ್ಚು ತೆಗೆದುಕೊಳ್ಳಲಿದೆ. ನೇರ ಮಾರ್ಗದಲ್ಲಿ ತೆರಳುವುದಿದ್ದರೆ, ವಿಮಾನ ದಿಲ್ಲಿಯಿಂದ ಪಾಕಿಸ್ತಾನ-ಅಪ್ಘಾನಿಸ್ಥಾನ- ಇರಾನ್ ಹಾಗೂ ಅನಂತರ ಯುರೋಪ್‌ಗೆ ತೆರಳಬೇಕು. ಭಾರತೀಯ ವಾಯು ಪಡೆ ಬಾಲಕೋಟ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಫೆಬ್ರವರಿ 27ರಿಂದ ಪಾಕಿಸ್ತಾನ ತನ್ನ ಹಾರಾಟ ಪ್ರದೇಶವನ್ನು ನಿರ್ಬಂಧಿಸಿತ್ತು. 138 ದಿನಗಳ ನಂತರ ಜುಲೈ 16ರಂದು ಈ ಹಾರಾಟ ಪ್ರದೇಶವನ್ನು ಮರು ಆರಂಭಿಸಿತ್ತು. ಈ ಸಂದರ್ಭ ದಿಲ್ಲಿಯಿಂದ ಪಶ್ಚಿಮಕ್ಕೆ ತೆರಳುವ ವಿಮಾನಗಳು ದೀರ್ಘ ಮಾರ್ಗದಲ್ಲಿ ಹಾರಾಟ ನಡೆಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News