ಅಮೆಝಾನ್ ದೇಶಗಳ ಸಭೆ

Update: 2019-09-07 14:40 GMT

ಲೆಟಿಶಿಯ (ಕೊಲಂಬಿಯ), ಸೆ.7: ಕಾಡ್ಗಿಚ್ಚು ಮತ್ತು ಅರಣ್ಯನಾಶದಿಂದಾಗಿ ಬೆದರಿಕೆ ಎದುರಿಸುತ್ತಿರುವ ಜಗತ್ತಿನ ಅತಿ ದೊಡ್ಡ ಅಮೆಝಾನ್ ಅರಣ್ಯವನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಏಳು ಅಮೆಝಾನ್ ದೇಶಗಳ ಅಧ್ಯಕ್ಷರು ಮತ್ತು ಸಚಿವರು ಕೊಲಂಬಿಯದಲ್ಲಿ ಶುಕ್ರವಾರ ಸಭೆ ಸೇರಿದರು.

ತಿಂಗಳುಗಟ್ಟಳೆ ಅವಧಿಯಲ್ಲಿ ಕಾಡ್ಗಿಚ್ಚಿನಿಂದಾಗಿ ಬ್ರೆಝಿಲ್ ಮತ್ತು ಬೊಲಿವಿಯ ದೇಶಗಳಲ್ಲಿ ಹರಡಿಕೊಂಡಿರುವ ಅಪಾರ ಪ್ರಮಾಣದ ಅಮೆಝಾನ್ ಅರಣ್ಯ ನಾಶವಾಗಿರುವ ಹಿನ್ನೆಲೆಯಲ್ಲಿ ಎದ್ದ ಅಂತರ್‌ರಾಷ್ಟ್ರೀಯ ಆಕ್ರೋಶದ ಬಳಿಕ ಈ ಸಭೆ ನಡೆದಿದೆ.

ದಕ್ಷಿಣ ಕೊಲಂಬಿಯದ ಅಮೆಝಾನ್ ನಗರ ಲೆಟಿಶಿಯದಲ್ಲಿ ನಡೆದ ಸಭೆಯನ್ನು ಕೊಲಂಬಿಯ ಅಧ್ಯಕ್ಷ ಇವಾನ್ ಡೂಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಣ್ಣ ಬಣ್ಣದ ಗರಿಗಳನ್ನು ಒಳಗೊಂಡ ಕಿರೀಟ ಧರಿಸಿದ ಟಿಕುನ ಬುಡಕಟ್ಟು ಜನಾಂಗದ ಸದಸ್ಯರು ಉಪಸ್ಥಿತರಿದ್ದರು.

ಕೊಲಂಬಿಯ, ಪೆರು, ಬೊಲಿವಿಯ ಮತ್ತು ಇಕ್ವೆಡಾರ್ ದೇಶಗಳ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸಿದರು. ಉಳಿದಂತೆ, ಬ್ರೆಝಿಲ್, ಸುರಿನಾಮ್ ಮತ್ತು ಗಯಾನ ದೇಶಗಳ ಪ್ರತಿನಿಧಿಗಳು ಭಾಗವಹಿಸಿದರು.

ಅಮೆಝಾನ್ ಕಾಡ್ಗಿಚ್ಚನ್ನು ನಂದಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಕ್ಕೆ ಗುರಿಯಾಗಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಈ ಸಭೆಯಲ್ಲಿ ಭಾಗವಹಿಸಿಲ್ಲ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂಬ ಕಾರಣವನ್ನು ಅವರು ನೀಡಿದ್ದಾರೆ. ಅವರ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News