ಖ್ಯಾತ ನ್ಯಾಯವಾದಿ, ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ನಿಧನ

Update: 2019-09-08 14:12 GMT
ಹೊಸದಿಲ್ಲಿ, ಸೆ.8: ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ರವಿವಾರ ಬೆಳಿಗ್ಗೆ ಹೊಸದಿಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ರಾಜ್ಯಸಭೆಯ ಹಾಲಿ ಸದಸ್ಯರಾಗಿರುವ ಜೇಠ್ಮಲಾನಿ ಒಟ್ಟು ಆರು ಬಾರಿ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ವಾಜಪೇಯಿ ಸರಕಾರದಲ್ಲಿ ಕಾನೂನು ಮತ್ತು ನ್ಯಾಯ ಇಲಾಖೆಯ ಸಚಿವರಾಗಿ ಕೆಲ ಸಮಯ ಕಾರ್ಯ ನಿರ್ವಹಿಸಿದ್ದರು. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ , ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಸದಸ್ಯರಾಗಿದ್ದ ಜೇಠ್ಮಲಾನಿಯವರನ್ನು ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ 2013ರಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. 2015ರಲ್ಲಿ ಪ್ರಧಾನಿ ಮೋದಿಯವರನ್ನುದ್ದೇಶಿಸಿ ಟ್ವಿಟರ್ನಲ್ಲಿ ಹೇಳಿಕೆ ನೀಡಿದ್ದ ಜೇಠ್ಮಲಾನಿ, ನಿಮ್ಮ ಬಗ್ಗೆ ನನ್ನ ಕ್ಷೀಣಿಸುತ್ತಿದ್ದ ಗೌರವ ಈಗ ಕೊನೆಗೊಳ್ಳುತ್ತಿದೆ ಎಂದಿದ್ದರು. 18ನೇ ವಯಸ್ಸಿನಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಜೇಠ್ಮಲಾನಿ ದೇಶ ವಿಭಜನೆಯಾಗುವವರೆಗೂ ಕರಾಚಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 1959ರಲ್ಲಿ ತನ್ನ ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿಸಿದ ಆರೋಪ ಎದುರಿಸುತ್ತಿದ್ದ ನೌಕಾದಳದ ಅಧಿಕಾರಿ ಕೆಎಂ ನಾನಾವತಿ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡಿಸಿ ಖ್ಯಾತರಾಗಿದ್ದರು. 2017ರಲ್ಲಿ ವಕೀಲ ವೃತ್ತಿಯಿಂದ ನಿವೃತ್ತಿಯಾಗಿದ್ದರು. ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. 1923ರ ಸೆಪ್ಟೆಂಬರ್ 14ರಂದು ಜನಿಸಿದ್ದ ಜೇಠ್ಮಲಾನಿ 95ನೇ ವಯಸ್ಸಿಗೆ ನಿಧನರಾಗಿದ್ದಾರೆ. ಸಾರ್ವಜನಿಕ ವಿಷಯಗಳನ್ನು ತಮ್ಮ ವಿಶಿಷ್ಟ ವಾಕ್ಚಾತುರ್ಯದಿಂದ ವಿಶ್ಲೇಷಿಸುತ್ತಿದ್ದ ಜೇಠ್ಮಲಾನಿ ನಿಧನದಿಂದ ದೇಶವು ಖ್ಯಾತ ನ್ಯಾಯವಾದಿ, ಕಾನೂನು ಪಂಡಿತನನ್ನು ಕಳೆದುಕೊಂಡಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ. ಜೇಠ್ಮಲಾನಿ ಒಬ್ಬ ಅಪ್ರತಿಮ ನ್ಯಾಯವಾದಿಯಾಗಿದ್ದು ನ್ಯಾಯಾಲಯ ಹಾಗೂ ಸಂಸತ್ತಿನಲ್ಲಿ ಯಾವುದೇ ವಿಷಯಗಳ ಬಗ್ಗೆ ಹಿಂಜರಿಕೆಯಿಲ್ಲದೆ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂದು ಪ್ರಧಾನಿ ಮೋದಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ. ತಮ್ಮಿಬ್ಬರ ಮಧ್ಯೆ ವಯಸ್ಸಿನ ಭಾರೀ ಅಂತರವಿದ್ದರೂ ಅವರೊಬ್ಬ ಸ್ನೇಹಪರ ಮಿತ್ರನಾಗಿದ್ದರು. ಅವರೊಬ್ಬ ಧೈರ್ಯಶಾಲಿ, ಹುರುಪಿನ ಹಾಗೂ ಅದಮ್ಯ ಚೇತನದ ವ್ಯಕ್ತಿಯಾಗಿದ್ದರು ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಅಮಿತ್ ಶಾ, ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರೂ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News