×
Ad

'ವಿಕ್ರಮ್ ಲ್ಯಾಂಡರ್' ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿದೆ: ಇಸ್ರೋ ಅಧ್ಯಕ್ಷ ಕೆ.ಶಿವನ್

Update: 2019-09-08 14:29 IST

ಹೊಸದಿಲ್ಲಿ,ಸೆ.8: ಚಂದ್ರಯಾನ-2ರ ಸಾಫ್ಟ್ ಲ್ಯಾಂಡಿಂಗ್‌ನ ಕೊನೆಯ ಕ್ಷಣಗಳಲ್ಲಿ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ಮೇಲಿರುವುದು ಪತ್ತೆಯಾಗಿದ್ದು,ಚಂದ್ರನ ಕಕ್ಷೆಯನ್ನು ಸುತ್ತುತ್ತಿರುವ ಆರ್ಬಿಟರ್ ವಿಕ್ರಮ್‌ನ ಚಿತ್ರಗಳನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರು ರವಿವಾರ ಪ್ರಕಟಿಸಿದ್ದಾರೆ. ಆದರೆ,ಈವರೆಗೂ ವಿಕ್ರಮ್ ಜೊತೆ ಸಂವಹನ ಸಾಧ್ಯವಾಗಿಲ್ಲ ಮತ್ತು ಅದರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಲ್ಯಾಂಡರ್ ನಿಧಾನ ಗತಿಯಲ್ಲಿ ಇಳಿಯಬೇಕಿತ್ತು. ಆದರೆ ಸಂಪರ್ಕ ಕಳೆದುಕೊಂಡ ಬಳಿಕ ಅದು ವೇಗವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿರಬೇಕು ಎಂದು ಶಿವನ್ ಹೇಳಿದರಾದರೂ,‘ಈಗಲೇ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ,ನಾವು ವಿಕ್ರಮ್ ಜೊತೆ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಿದ್ದೇವೆ ’ ಎಂದರು.

 ಶನಿವಾರ ಬೆಳಗಿನ ಜಾವ ಈವರೆಗೂ ಯಾವುದೇ ದೇಶವು ಅನ್ವೇಷಿಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ಲ್ಯಾಂಡರ್ ತನ್ನ ಗುರಿಯನ್ನು ಸಾಧಿಸುವ ಕೆಲವೇ ಕ್ಷಣಗಳಿಗೆ ಮುನ್ನ ಚಂದ್ರನ ಮೇಲ್ಮೈನಿಂದ ಕೇವಲ 2.1 ಕಿ.ಮೀ. ದೂರವಿರುವಾಗ ಭೂಕೇಂದ್ರದೊಡನೆ ಸಂಪರ್ಕವನ್ನು ಕಳೆದುಕೊಂಡಿತ್ತು.

ಚಂದ್ರಯಾನ-2ರ ಆರ್ಬಿಟರ್ ಅಥವಾ ಕಕ್ಷೆಗಾಮಿಯು ಈಗಾಗಲೇ ಚಂದ್ರನ ಉದ್ದೇಶಿತ ಕಕ್ಷೆಯನ್ನು ಪರಿಭ್ರಮಿಸುತ್ತಿದೆ. ಸದ್ಯಕ್ಕೆ ಹೆಚ್ಚುವರಿ ಇಂಧನವನ್ನು ಹೊಂದಿರುವ ಅದರ ಜೀವಿತಾವಧಿ 7.5 ವರ್ಷಗಳೆಂದು ಅಂದಾಜಿಸಲಾಗಿದೆ.

 ಆರ್ಬಿಟರ್ ಹೈ ರೆಸೊಲ್ಯೂಷನ್ ಚಿತ್ರಗಳನ್ನು ಕಳುಹಿಸಲಿದೆ ಮತ್ತು ಚಂದ್ರನ ಹುಟ್ಟಿನ ಕುರಿತು ಅಧ್ಯಯನ ಹಾಗೂ ಅದರ ಧ್ರುವೀಯ ಪ್ರದೇಶದಲ್ಲಿ ಖನಿಜಗಳು ಮತ್ತು ನೀರಿನ ಮ್ಯಾಪಿಂಗ್ ಕಾರ್ಯಗಳಿಗೆ ನೆರವಾಗಲಿದೆ ಎಂದು ಇಸ್ರೋ ರವಿವಾರ ಬೆಳಿಗ್ಗೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಜುಲೈ 22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಅಂತರಿಕ್ಷ ಕೇಂದ್ರದಿಂದ ಚಂದ್ರಯಾನ-2 ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಸುಮಾರು 23 ದಿನಗಳ ಕಾಲ ಪೃಥ್ವಿಯ ಕಕ್ಷೆಯಲ್ಲಿ ಸುತ್ತುತ್ತಿದ್ದ ಚಂದ್ರಯಾನ-2 ಆ.14ರಂದು ಚಂದ್ರನತ್ತ ತನ್ನ ಪಯಣವನ್ನು ಆರಂಭಿಸಿತ್ತು. ಸೆ.2ರಂದು ತನ್ನ ಒಡಲಲ್ಲಿ ಪ್ರಜ್ಞಾನ್ ರೋವರ್‌ನೊಂದಿಗೆ ವಿಕ್ರಮ ಲ್ಯಾಂಡರ್ ಆರ್ಬಿಟರ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News