ಭಾಗ್ವತ್ - ಮೌಲಾನಾ ಭೇಟಿಯಲ್ಲಿ ಚರ್ಚೆಯಾಗಿದ್ದೇನು ?

Update: 2019-09-08 15:30 GMT
ಮೋಹನ್ ಭಾಗ್ವತ್, ಮೌಲಾನಾ ಅರ್ಷದ್ ಮದನಿ

ದೇಶದಲ್ಲಿ ಮತೀಯ ಭಾವನೆ ಹಾಗು ಕೋಮು ಧ್ರುವೀಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ದೇವ್ ಬಂದ್ ಮೂಲದ ದೇಶದ ಪ್ರಭಾವೀ ಉಲೇಮಾ ಸಂಘಟನೆ, ಶತಮಾನದ ಇತಿಹಾಸ ಇರುವ ಜಮೀಯತ್ ಉಲೇಮಾ ಹಿಂದ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಇತ್ತೀಚಿಗೆ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಈವರೆಗೆ ಆರೆಸ್ಸೆಸ್ ಕಟುವಾಗಿ ಟೀಕಿಸುತ್ತಿದ್ದ, ಅದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದ  ಮೌಲಾನಾ ಅರ್ಷದ್ ಮದನಿ ಈಗ ಅವರ  ಕಚೇರಿಗೇ ಹೋಗಿ ಸುಮಾರು ಒಂದೂವರೆ ಗಂಟೆ ಮಾತುಕತೆ ನಡೆಸಿ ಬಂದಿರುವುದು ಎಲ್ಲರ ಹುಬ್ಬೇರಿಸಿದೆ. 

ತನ್ನ ಭೇಟಿ ಕುರಿತು thequint.com ಪ್ರತಿನಿಧಿ ಜೊತೆ ಮೌಲಾನಾ ಅವರು ನಡೆಸಿದ ಮಾತುಕತೆ ಇಲ್ಲಿದೆ : 

ಪ್ರಶ್ನೆ: ನೀವು ಇತ್ತೀಚಿಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಭೇಟಿಯಾಗಿ ಬಂದಿದ್ದೀರಿ. ಆ ಭೇಟಿ ಹೇಗೆ ಸಾಧ್ಯವಾಯಿತು ?

ಮೌಲಾನಾ: ನನಗೆ ಅದರ ಬಗ್ಗೆ ಗೊತ್ತೇ ಇರಲಿಲ್ಲ. ಅವರನ್ನು ಭೇಟಿಯಾಗುತ್ತೀರಾ ಎಂದು ಒಬ್ಬರು ಕೇಳಿದರು. ಆರೆಸ್ಸೆಸ್ ಈಗ ದೇಶದ ಅತ್ಯಂತ ಬಲಿಷ್ಠ ಸಂಘಟನೆ. ಈಗ ಭಾಗ್ವತ್ ರಷ್ಟು ಪ್ರಭಾವೀ ಭಾರತದಲ್ಲಿ ಯಾರೂ ಇಲ್ಲ. ಅವರು ನನ್ನನ್ನು ಭೇಟಿಯಾಗುವುದಿಲ್ಲ ಎಂದು ಹೇಳಬಹುದಿತ್ತು. ಆದರೆ ಅವರು ಹಾಗೆ ಮಾಡದೆ, ನಾವು ಆಗಾಗ ಭೇಟಿಯಾಗೋಣ ಎಂದು ಹೇಳಿದರು.  

ಪ್ರಶ್ನೆ: ಹಿಂದೂ ರಾಷ್ಟ್ರ ನಿರ್ಮಾಣ ಆರೆಸ್ಸೆಸ್ ನ ಮೂಲ ಸಿದ್ಧಾಂತದಲ್ಲಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ ? 
ಮೌಲಾನಾ: ನಮ್ಮ ಪ್ರಕಾರ ಈ ದೇಶದಲ್ಲಿ ಎಲ್ಲರಿಗೂ ಅವರವರ ಧಾರ್ಮಿಕ ಆಚರಣೆಗೆ ಸ್ವಾತಂತ್ರ್ಯ ಇರಬೇಕು. ಭಾಗ್ವತ್ ಅವರು ಹಿಂದೂ ರಾಷ್ಟ್ರ ಸ್ಥಾಪನೆ ಕುರಿತು ನನ್ನಲ್ಲಿ ಏನನ್ನೂ ಹೇಳಲಿಲ್ಲ. 

ಪ್ರಶ್ನೆ: ಹಾಗಾದರೆ ಆರೆಸ್ಸೆಸ್ ಹಿಂದೂ ರಾಷ್ಟ್ರ ಸಿದ್ಧಾಂತವನ್ನು ಬಿಟ್ಟುಬಿಡಬಹುದು ಎಂದು ನಿಮಗೆ ಅನಿಸುತ್ತದೆಯೇ ?
ಮೌಲಾನಾ: ಹಾಗೆ ಆಗಲೂಬಹುದು. ಈಗ ದೇಶ ವಿನಾಶದತ್ತ ಹೋಗುವ ಪರಿಸ್ಥಿತಿಯಿದೆ. ಆರ್ಥಿಕವಾಗಿ ಈಗಾಗಲೇ ವಿನಾಶವಾಗಿದೆ ಅಥವಾ ಆಗುವ ದಾರಿಯಲ್ಲಿದೆ.  ಹಾಗಾಗಿ ಅವರು ಖಂಡಿತ ಹಿಂದೂ ರಾಷ್ಟ್ರದಂತಹ ವಿಷಯಗಳನ್ನು ಬಿಟ್ಟು ಬಿಡಬಹುದು. ನಿನ್ನೆಯ ಯೋಚನೆ ನಾಳೆಗೆ ಬದಲಾಗಬಹುದು. 

ಪ್ರಶ್ನೆ: ಆದರೂ ಹಿಂದೂ ರಾಷ್ಟ್ರ ಅವರ ಮೂಲ ಸಿದ್ಧಾಂತ ... 
ಮೌಲಾನಾ: ಇಲ್ಲ, ಇಲ್ಲ. ನಾನು ಅದರ ಬಗ್ಗೆ ಅವರ ಜೊತೆ ಮಾತಾಡಿದ್ದೇನೆ... 

ಪ್ರಶ್ನೆ: ಏನೆಂದು ಮಾತಾಡಿದಿರಿ ?

ಮೌಲಾನಾ:  ಮುಸ್ಲಿಮರು ಹಾಗು ಜಾತ್ಯತೀತತೆ ವಿರುದ್ಧ ಕಿಡಿಕಾರುವ ಆರೆಸ್ಸೆಸ್ ವ್ಯಕ್ತಿಗಳ ಬಗ್ಗೆ ನಾನು ಕೇಳಿದ್ದಕ್ಕೆ, ಈಗ ಆರೆಸ್ಸೆಸ್ ಅಂತಹ ಆಲೋಚನೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಭಾಗ್ವತ್ ಹೇಳಿದರು. 

ಪ್ರಶ್ನೆ: ಹಾಗಾದರೆ ನೀವು ಇನ್ನು ಮುಂದೆ ಆರೆಸ್ಸೆಸ್ ಬಗ್ಗೆ ಮೃದುವಾಗುತ್ತೀರಾ ?
ಮೌಲಾನಾ: ಖಂಡಿತ. ಆರೆಸ್ಸೆಸ್ ನಮ್ಮ ಬಗ್ಗೆ ಮೃದುವಾದರೆ ನಾವೂ ಅವರ ಬಗ್ಗೆ ಮೃದುವಾಗಬಾರದೇಕೆ ?

ಪ್ರಶ್ನೆ: ಗುಂಪು ಹತ್ಯೆಗಳ ಬಗ್ಗೆ ನೀವು ಅವರಲ್ಲಿ ಚರ್ಚಿಸಿದ್ದೀರಾ? ಈ ಗುಂಪು ಹತ್ಯೆಗಳ ಆರೋಪಿಗಳು ಹೆಚ್ಚಾಗಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಎಂದು ನಿಮಗೆ ಗೊತ್ತಲ್ಲವೇ ?

ಮೌಲಾನಾ: ಗುಂಪು ಹತ್ಯೆಗಳ ಬಗ್ಗೆ ನಾವು ವಿವರವಾಗಿ ಚರ್ಚಿಸಿದೆವು. ಮುಂದಿನ ದಿನಗಳಲ್ಲಿ ಆ ಚರ್ಚೆಯ ಫಲಿತಾಂಶ ತಿಳಿಯಲಿದೆ. ಹೇಗೆ ಪರಿಸ್ಥಿತಿ ಬದಲಾಗಬಹುದು ಎಂದು  ಕಾದು ನೋಡೋಣ. 

ಪ್ರಶ್ನೆ: ತ್ರಿವಳಿ ತಲಾಕ್ ಮಸೂದೆ ಬಗ್ಗೆ ಅವರು ಏನು ಹೇಳಿದರು ?
ಮೌಲಾನಾ: ಅದರ ಬಗ್ಗೆ ನಾವು ಚರ್ಚಿಸಿಲ್ಲ. ತ್ರಿವಳಿ ತಲಾಕ್ ಮಸೂದೆಗೆ ನಮ್ಮ ವಿರೋಧವಿಲ್ಲ. ಆದರೆ ಅದರಲ್ಲಿರುವ ಲೋಪಗಳನ್ನು ಸರಿಪಡಿಸಬೇಕು. ಈ ಬಗ್ಗೆ ನಾವು ಕೋರ್ಟ್ ಗೆ ಹೋಗಿದ್ದೇವೆ. ಕೋರ್ಟ್ ವಿಚಾರಣೆಗೆ ಒಪ್ಪಿದರೆ ನಮ್ಮ ವಕೀಲರು ವಾದ ಮಂಡಿಸಲು ಸಜ್ಜಾಗಿದ್ದಾರೆ. "

ಪ್ರಶ್ನೆ: ಎನ್ ಆರ್ ಸಿ ( ರಾಷ್ಟ್ರೀಯ ನಾಗರಿಕತ್ವ ನೋಂದಣಿ ) ಮುಸ್ಲಿಂ ವಿರೋಧಿ ಎಂದು ನಿಮಗೆ ಅನಿಸುತ್ತದೆಯೇ ?
ಮೌಲಾನಾ: ಎನ್ ಆರ್ ಸಿ ಮುಸ್ಲಿಂ ವಿರೋಧಿ ಎಂದು ಸರಕಾರದ ಧೋರಣೆಯೇ ಹೇಳುತ್ತಿದೆ. ನಾವು ಹೊರಗಿನಿಂದ ಹಿಂದೂಗಳು ಬಂದರೆ ನಾಗರಿಕತ್ವ ನೀಡುತ್ತೇವೆ, ಮುಸ್ಲಿಮರು ಬಂದರೆ ನೀಡುವುದಿಲ್ಲ ಎಂದು ಸರಕಾರವೇ ಹೇಳುತ್ತಿದೆ ಎಂದರೆ ಅದರ ಅರ್ಥವೇನು ? 

ಪ್ರಶ್ನೆ: ಹಾಗಾದರೆ ಎನ್ ಆರ್ ಸಿ ಬಗ್ಗೆ ಭಾಗ್ವತ್ ಅವರನ್ನು ಕೇಳಿದಿರಾ ?
ಮೌಲಾನಾ: ಎನ್ ಆರ್ ಸಿ (ಅಸ್ಸಾಂ) ವಿವಾದದ ಬಗ್ಗೆ ನಾನು ಅವರೊಂದಿಗೆ ಚರ್ಚಿಸಿಲ್ಲ. ನಾನು ದೇಶದಲ್ಲಿ ಸೌಹಾರ್ದ ನೆಲೆಸಲು ಏನು ಮಾಡಬಹುದು ಎಂದು ಚರ್ಚಿಸಲು ಹೋಗಿದ್ದೆ. ದೇಶದ ಸಮಸ್ಯೆಗಳನ್ನು ಪರಿಹರಿಸಲು ಅಲ್ಲ. 

ಪ್ರಶ್ನೆ: ಈಗ ನೀವು ನಿಮ್ಮ ಅನುಯಾಯಿಗಳಿಗೆ ಏನು ಹೇಳುತ್ತೀರಿ ? ಅವರು ನಿಮ್ಮ ಭೇಟಿಯಿಂದ ಏನನ್ನು ನಿರೀಕ್ಷಿಸಬೇಕು ? 
ಮೌಲಾನಾ: ನಮ್ಮ ಚರ್ಚೆ ಮುಂದುವರಿದು ಏನಾದರೂ ತೀರ್ಮಾನಕ್ಕೆ ಬಂದರೆ ಅದನ್ನು ಅವರು ಅವರ ಸಮುದಾಯಕ್ಕೆ ಹೇಳುತ್ತಾರೆ, ನಾನು ನನ್ನ ಸಮುದಾಯಕ್ಕೆ ಹೇಳುತ್ತೇನೆ ಎಂದು ಮಾತಾಡಿಕೊಂಡಿದ್ದೇವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News