ಬಿಹಾರದ ಮುಸ್ಲಿಮರಿಲ್ಲದ ಗ್ರಾಮದಲ್ಲಿ ಹಿಂದೂಗಳಿಂದ 200 ವರ್ಷ ಹಳೆಯ ಮಸೀದಿ ನಿರ್ವಹಣೆ, ನಮಾಝ್

Update: 2019-09-08 17:12 GMT

ಪಾಟ್ನಾ, ಸೆ. 8: ದೇಶದಲ್ಲಿ ಧರ್ಮಾಂಧತೆ ಹಾಗೂ ಕೋಮು ಗಲಭೆಯ ಘಟನೆಗಳು ಹೆಚ್ಚುತ್ತಿರುವ ನಡುವೆ ಬಿಹಾರದ ನಲಂದಾ ಜಿಲ್ಲೆಯ ಗ್ರಾಮವೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ನಲಂದಾ ಜಿಲ್ಲೆಯ ಮಾಧಿ ಗ್ರಾಮದಲ್ಲಿ ಮುಸ್ಲಿಮರಿಲ್ಲ. ಆದರೆ, ಇಲ್ಲಿನ 200 ವರ್ಷಗಳ ಹಳೆಯ ಮಸೀದಿಯೊಂದರಲ್ಲಿ ಹಿಂದೂಗಳು ಪ್ರತಿದಿನ ಐದು ಬಾರಿ ನಮಾಝ್ ಮಾಡುತ್ತಿದ್ದಾರೆ. ಅಲ್ಲದೆ, ಹಿಂದೂಗಳೇ ಮಸೀದಿಯನ್ನು ನಿರ್ವಹಿಸುತ್ತಿದ್ದಾರೆ. 

‘‘ನಮಗೆ (ಹಿಂದೂಗಳು) ಆಝಾನ್ ತಿಳಿದಿಲ್ಲ. ಆದರೆ, ಪೆನ್‌ಡ್ರೈವ್‌ನಲ್ಲಿ ರೆಕಾರ್ಡಿಂಗ್ ಮಾಡಿದ ಆಝಾನ್ ಅನ್ನು ಧ್ವನಿವರ್ಧಕದಲ್ಲಿ ನುಡಿಸಲಾಗುತ್ತದೆ’’ ಎಂದು ಗ್ರಾಮದ ನಿವಾಸಿ ಹನ್ಸ್ ಕುಮಾರ್ ಹೇಳಿದ್ದಾರೆ. ಮಾಧಿಯಲ್ಲಿ ಗಣನೀಯ ಸಂಖ್ಯೆಯ ಮುಸ್ಲಿಮರು ಇದ್ದರು. ಆದರೆ, ಅವರು ಕ್ರಮೇಣ ವಲಸೆ ಹೋದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

‘‘ಮಸೀದಿ ನಿರ್ವಹಿಸಲು ಯಾರೊಬ್ಬರೂ ಇರಲಿಲ್ಲ. ಆದುದರಿಂದ ಹಿಂದೂಗಳು ಮುಂದೆ ಬಂದರು’’ ಎಂದು ಮಸೀದಿ ನಿರ್ವಹಿಸುತ್ತಿರುವ ಗೌತಮ್ ಹೇಳಿದ್ದಾರೆ. ಮಸೀದಿಯನ್ನು ಯಾವಾಗ ನಿರ್ಮಾಣ ಮಾಡಲಾಯಿತು ಹಾಗೂ ಯಾರು ನಿರ್ಮಾಣ ಮಾಡಿದರು ಎಂಬ ಬಗ್ಗೆ ಯಾರೊಬ್ಬರಿಗೂ ತಿಳಿದಿಲ್ಲ. ಆದರೆ, ಹಿಂದೂಗಳು ಯಾವುದೇ ಶುಭ ಸಮಾರಂಭದ ಮುನ್ನ ಮಸೀದಿಗೆ ಭೇಟಿ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ. 

‘‘ಮಸೀದಿಯನ್ನು ದಿನನಿತ್ಯ ಸ್ವಚ್ಚಗೊಳಿಸಲಾಗುತ್ತದೆ. ಅಲ್ಲದೆ, ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ತಮಗೆ ಸಮಸ್ಯೆ ಎದುರಾದಾಗ ಕೂಡ ಜನರು ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ’’ ಎಂದು ಗ್ರಾಮದ ಅರ್ಚಕ ಜಾಂಕಿ ಪಂಡಿತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News