ರಕ್ತದಾನದಂತಹ ಸಮಾಜ ಸೇವೆಗೆ ಯಾವುದೇ ಜಾತಿ ಧರ್ಮಗಳ ತಡೆಗೋಡೆ ಇಲ್ಲ : ಅಬೂಬಕ್ಕರ್ ಸಖಾಫಿ

Update: 2019-09-09 05:42 GMT

ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು  ಶಂಸುಲ್ ಉಲಮಾ ಕ್ರಿಯಾ ಸಮಿತಿ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ವಳಚ್ಚಿಲ್ ಜಂಟಿ ಆಶ್ರಯದಲ್ಲಿ ಇಂಡಿಯನ್  ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಭಾಗಿತ್ವದಲ್ಲಿ 'ಮರ್ಹೂಂ ಎಬಿ ಹೈದರ್ ವಳಚ್ಚಿಲ್ ಪದವು' ಸ್ಮರಣಾರ್ಥ ವಳಚ್ಚಿಲ್ ಪದವು ಮದ್ರಸ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ವಳಚ್ಚಿಲ್ ಪದವು ಮಸೀದಿ ಖತೀಬ್ ಅಬೂಬಕ್ಕರ್ ಸಖಾಫಿ ದುವಾಶೀರ್ವಚನದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶಂಸುಲ್ ಉಲಮಾ‌ ಕ್ರಿಯಾ ಸಮಿತಿ ವಳಚ್ಚಿಲ್ ಅಧ್ಯಕ್ಷ ಶಮೀರ್ ಶಾನ್ ಅಧ್ಯಕ್ಷತೆಯಲ್ಲಿ ವಳಚ್ಚಿಲ್ ಕೇಂದ್ರ ಜುಮಾ ಮಸೀದಿ  ಖತೀಬ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಉದ್ಘಾಟಿಸಿದರು.

ನಂತರ ಮಾತನಾಡಿದ ಅಬೂಬಕ್ಕರ್ ಸಖಾಫಿ "ರಕ್ತದಾನ ಮಾಡುವುದನ್ನು ಪರಿಶುದ್ಧ ಇಸ್ಲಾಂ ಅನುಮತಿಸಿರುವುದು ಮಾತ್ರವಲ್ಲ, ಅದನ್ನು ಪ್ರೋತ್ಸಾಹಿಸುತ್ತದೆ ಎಂಬುವುದನ್ನು ನಾವು ಧರ್ಮಗ್ರಂಥಗಳಲ್ಲಿ ಕಾಣಬಹುದು.ಇಂತಹ ಉತ್ತಮ ಕಾರ್ಯಗಳಿಗೆ ಯಾವುದೇ ಜಾತಿ ಧರ್ಮಗಳ ತಡೆಗೋಡೆ ಇರುವುದಿಲ್ಲ" ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಚ್ ಡಿಎಫ್ ಸಿ ಬ್ಯಾಂಕ್ ಮಂಗಳೂರು ಶಾಖೆಯ ಡೆಪ್ಯುಟಿ ಮ್ಯಾನೇಜರ್, ಹರೀಶ.ಎಸ್ ಮಾತನಾಡಿ, ಎಚ್ ಡಿಎಫ್ ಸಿ  ಪರಿವರ್ತನ್ ಎಂಬ ಕಾರ್ಯಕ್ರಮದ ಮೂಲಕ ಕಳೆದ ಹನ್ನೆರಡು ವರ್ಷಗಳಿಂದ ದೇಶದಾದ್ಯಂತ ಈ ವರೆಗೆ ಹದಿನಾರು ಸಾವಿರ ರಕ್ತದಾನ ಶಿಬಿರಗಳಿಗೆ ಸಹಯೋಗವನ್ನು ನೀಡಿದೆ ಎಂದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸಂಘಟಕರಾದ ಇಮ್ರಾನ್ ಅಡ್ಡೂರು ಸಂಸ್ಥೆಯ ಬಗ್ಗೆ ವಿವರಿಸುತ್ತಾ ಮೂರು ವರ್ಷಗಳನ್ನು ಪೂರೈಸಿರುವ ಸಂಸ್ಥೆಯು ಈ ವರೆಗೆ 86 ರಕ್ತದಾನ ಶಿಬಿರಗಳನ್ನು ಆಯೋಜಿಸಿ ತುರ್ತು  ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತ ಪೊರೈಕೆ ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಿ ಎಲ್ಲರ ಸಹಕಾರವನ್ನು ಕೋರಿದರು.

ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 68  ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ನಾಗರಿಕ ಕ್ರಿಯಾ ಸಮಿತಿ ವಳಚ್ಚಿಲ್ ಅಧ್ಯಕ್ಷ ಐವನ್ ಅವಿನಾಶ್ ಡಿಸೋಜ, ಶ್ರೀ ನಾಗನಾಗಣಿ ನಾಗಬ್ರಹ್ಮ ಕ್ಷೇತ್ರ ಅರ್ಕುಳ ಮೆರ್ಲಪದವು ಅಧ್ಯಕ್ಷ ಕಮಲಾಕ್ಷ ಕೊಟ್ಟಾರಿ , ಶ್ರೀ ನವೀನ್ ಡಿ'ಸೋಜ, ನಝೀರ್ ವಳಚ್ಚಿಲ್ ಪದವು, ಎಕೆ ಅಬ್ದುಲ್ ಖಾದರ್ ಕಣ್ಣೂರು, ಮೊಹಮ್ಮದ್ ಶ್ವಾಲಿಹ್ , ಸಾದಿಕ್ ಸಾಹೇಬ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಶಂಸುಲ್ ಉಲಮಾ ಕ್ರಿಯಾ ಸಮಿತಿ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಬಿರದ ಅಂಗವಾಗಿ ರಕ್ತದಾನದ ಬಗ್ಗೆ ಮಹಿಳೆಯರಿಗಾಗಿ  ಸಮಾಲೋಚನೆ ಹಾಗೂ ಮಾಹಿತಿ ಕೇಂದ್ರವನ್ನು ಹೆಲ್ತ್ ಇನ್ಸ್ಪೆಕ್ಟರ್ ಆಯಿಷಾ ಪೆರ್ನೆ ನಿರ್ವಹಿಸಿದರು.

ಜಬ್ಬಾರ್ ಹನೀಫಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News