ತಬ್ರೇಝ್ ಅನ್ಸಾರಿ ಗುಂಪು ಹತ್ಯೆ: ಚಾರ್ಜ್ ಶೀಟ್‍ ನಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ಕೈಬಿಟ್ಟ ಪೊಲೀಸರು!

Update: 2019-09-09 06:35 GMT

ರಾಂಚಿ, ಸೆ.9: ಜೂನ್ 17ರಂದು ಜಾರ್ಖಂಡ್ ನಲ್ಲಿ ತಬ್ರೇಝ್ ಅನ್ಸಾರಿ ಎಂಬ ಯುವಕನಿಗೆ ಗುಂಪೊಂದು ‘ಜೈ ಶ್ರೀ ರಾಮ್’ ಹಾಗೂ ‘ಜೈ ಹನುಮಾನ್’ ಹೇಳುವಂತೆ ಬಲವಂತಪಡಿಸಿ ಆತನನ್ನು ಥಳಿಸಿ ಕೊಂದ ಪ್ರಕರಣದ ಸಂಬಂಧ ಜುಲೈ 29ರಂದು ಚಾರ್ಜ್ ಶೀಟ್ ಸಲ್ಲಿಸಿರುವ  ಪೊಲೀಸರು ತಬ್ರೇಝ್ ಮೇಲೆ ಹಲ್ಲೆಗೈದವರ ವಿರುದ್ಧ  ಕೊಲೆ ಆರೋಪವನ್ನು ಅದರಲ್ಲಿ ಕೈ ಬಿಟ್ಟಿದ್ದಾರೆ. ಇದಕ್ಕೆ ಆಕ್ಷೇಪ ಸೂಚಿಸಿ ತಬ್ರೇಝ್ ಪತ್ನಿ ಶಹಿಸ್ತಾ ಪರ ವಕೀಲ ಅಲ್ತಾಫ್ ಹುಸೈನ್ ಅವರು ಆಗಸ್ಟ್ 31ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದ ಆರೋಪಿಗಳನ್ನು ಪ್ರಕಾಶ್ ಮಂಡಲ್ ಅಲಿಯಾಸ್ ಪಪ್ಪು ಮಂಡಲ್, ಕಮಲ್ ಮಹತೋ, ಸುನಾಮೊ ಪ್ರಧಾನ್, ಪ್ರೇಮಚಂದ್ರ ಮಹಾಲಿ, ಸುಮಂತ್ ಮಹತೋ, ಮದನ್ ನಾಯಕ್, ಚಾಮು ನಾಯಕ್, ಮಹೇಶ್ ಮಹಳಿ, ಕುಶಲ್ ಮಹಳಿ, ಸತ್ಯನಾರಾಯಣ್ ನಾಯಕ್ ಹಾಗೂ ಭೀಮ್ ಸೇನ್ ಮಂಡಲ್ ಎಂದು ಗುರುತಿಸಲಾಗಿದೆ.

“ತಬ್ರೇಝ್ ದಿಢೀರ್ ಹೃದಯ ಸ್ಥಂಭನದಿಂದ ಮೃತಪಟ್ಟಿದ್ದಾನೆಂದು ಅಧಿಕಾರಿಗಳು ಹೇಳುತ್ತಿದ್ದಾರೆಂದು ನಮಗೆ ತಿಳಿದು ಬಂದಿದೆ. ಆತನ ತಲೆಯಲ್ಲಿ ದೊಡ್ಡ ಗಾಯವಿತ್ತು, ತಲೆಬುರುಡೆ ಹಲ್ಲೆಯಿಂದ ಒಡೆದಿತ್ತು. ಹೀಗಿರುವಾಗ ಹೃದಯ ಸ್ಥಂಭನದಿಂದ ಮೃತಪಟ್ಟಿದ್ದಾನೆಂದು ಹೇಗೆ ಹೇಳುತ್ತಾರೆ?'' ಎಂದು ಶಹಿಸ್ತಾರ ವಕೀಲ ಅಲ್ತಾಫ್ ಪ್ರಶ್ನಿಸುತ್ತಾರೆ.

ಪ್ರಕರಣದ ತನಿಖಾಧಿಕಾರಿ ಆರ್. ನಾರಾಯಣ್ ಕೂಡ ದಿಢೀರ್ ಹೃದಯ ಸ್ಥಂಭನ ಸಾವಿಗೆ ಕಾರಣವೆಂದು ಹೇಳಿದ್ದಾರೆ.  ಎರಡೆರಡು ವೈದ್ಯರ ಅಭಿಪ್ರಾಯ ಪಡೆಯಲಾಗಿದ್ದು ಇಬ್ಬರೂ ಇದೇ ಕಾರಣ ದೃಢಪಡಿಸಿದ್ದಾರೆ ಎಂದು ನಾರಾಯಣ್ ಹೇಳಿದ್ದಾರೆ.

ತಬ್ರೇಝ್ ಸಾವಿನ ಕಾರಣ ತಿಳಿಯಲು ರಚಿಸಲಾಗಿದ್ದ ಸರೈಕೆಲ-ಖಾರ್ವನ್ ಜಿಲ್ಲಾಧಿಕಾರಿ ಅಂಜನೇಯುಲ್ಲು ದೊಡ್ಡೆ ನೇತೃತ್ವದ ತ್ರಿಸದಸ್ಯ ತಂಡ ತಬ್ರೇಝ್ ಸಾವಿಗೆ ಪೊಲೀಸರು ಹಾಗೂ ವೈದ್ಯರನ್ನು ಹೊಣೆಯಾಗಿಸಿತ್ತು. “ಪೊಲೀಸರು ಸ್ಥಳಕ್ಕೆ ತಡವಾಗಿ ಆಗಮಿಸಿದ್ದರೆ, ವೈದ್ಯರು ಆತನ ತಲೆಬುರುಡೆಗಾದ ಗಾಯವನ್ನು  ಸರಿಯಾಗಿ ಗುರುತಿಸಿರಲಿಲ್ಲ'' ಎಂದು ದೊಡ್ಡೆ ನೇತೃತ್ವದ ತಂಡ ಜುಲೈ 12ರಂದು ನೀಡಿದ ವರದಿಯಲ್ಲಿ ತಿಳಿಸಿತ್ತು.

ಆದರೆ ಇದೀಗ ಹೃದಯ ಸ್ಥಂಭನ ಸಾವಿಗೆ ಕಾರಣವೆಂದು ದೃಢಪಟ್ಟಿದ್ದರಿಂದ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಹಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪೊಲೀಸರು ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ವಕೀಲ ಅಲ್ತಾಫ್ ಹೇಳುತ್ತಾರೆ. ತನ್ನ ಪತಿ ಮನೆಯಿಂದ ಹೆತ್ತವರ ಮನೆಗೆ ಮರಳಿರುವ ಶಹಿಸ್ತಾ ತನ್ನ ಪತಿಯ ಮಾವ ಮಸೂರ್ ಜತೆ ಆಗಾಗ ನ್ಯಾಯಾಲಯಕ್ಕೆ ಹಾಗೂ ಪೊಲೀಸ್ ಠಾಣೆಗೆ ಅಲೆದಾಡುತ್ತಾ ಪತಿಯ ಸಾವಿಗೆ ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಇದೀಗ ಆಕೆ ನ್ಯಾಯಾಲಯದಿಂದ ನ್ಯಾಯ ದೊರಕುವ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News