ಉಡುಪಿ: ರೈತರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಸಭೆ

Update: 2019-09-09 15:10 GMT

ಉಡುಪಿ, ಸೆ.9: ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ರೈತ ಪ್ರತಿನಿಧಿಗಳ ಸಭೆಯೊಂದನ್ನು ಆಯೋಜಿಸಿದರು.

ಸಭೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಮಾಲೋಚನೆ ಹಾಗೂ ಚರ್ಚೆಗಳನ್ನು ನಡೆಸಲಾಯಿತು. ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳಾದ ಪ್ರಾಕೃತಿಕ ವಿಕೋಪದಿಂದ ನಷ್ಟವಾದ ಗದ್ದೆ ಹಾಗೂ ತೋಟಗಳಿಗೆ ನೈಜ ನಷ್ಟದ ಆಧಾರದಲ್ಲಿ ಪರಿಹಾರ, ಜಿಲ್ಲೆಯಾದ್ಯಂತ ಅಡಿಕೆ ತೋಟಗಳಲ್ಲಿ ಕಾಣಿಸಿಕೊಂಡಿ ರುವ ಕೊಳೆರೋಗಕ್ಕೆ ಪರಿಹಾರ ಘೋಷಿಸುವುದು,ಭತ್ತದ ಬೆಳೆಗೆ ಪ್ರೋತ್ಸಾಹಧನ, ಬಾಡಿಗೆಯಂತ್ರ ಕೇಂದ್ರಗಳ ನ್ಯೂನ್ಯತೆಗಳನ್ನು ಸರಿಪಡಿಸುವ ಕುರಿತು ಚರ್ಚಿಸಲಾಯಿತು.

ಅಲ್ಲದೇ ಜಿಲ್ಲೆಯ ರೈತರಿಗೆ ತೀವ್ರ ಸಮಸ್ಯೆಯೊಡ್ಡುತ್ತಿರುವ ಕಾಡುಪ್ರಾಣಿಗಳ ಹಾವಳಿಗೆ ಕೈಗೊಳ್ಳಬಹುದಾದ ಕ್ರಮ, ಡೀಮ್ಡ್ ಫಾರೆಸ್ಟ್, ಬೆಳೆ ಸಮೀಕ್ಷೆ, ಕಾಡುಪ್ರಾಣಿಗಳಿಂದ ರೈತರಿಗಾದ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ, ಅಕೇಶಿಯಾ ಗಿಡ ನೆಡುವುದರಿಂದ ಜನರಿಗಾಗುತ್ತಿರುವ ಸಮಸ್ಯೆ, ವೆಂಟೆಡ್ ಡ್ಯಾಂಗಳ ನಿರ್ವಹಣೆ, ಜಿಲ್ಲೆಯಲ್ಲಿ ಕಬ್ಬಿನ ಬೆಳೆ ಬೆಳೆಯಲು ಪ್ರೋತ್ಸಾಹ ಮೊದಲಾದ ವಿಚಾರಗಳ ಕುರಿತು ಸುಧೀರ್ಘವಾಗಿ ಚರ್ಚಿಸಿ, ಕೆಲವೊಂದು ಪರಿಾರ ಮಾರ್ಗವನ್ನೂ ಸೂಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರದ ಉಪವಿಭಾಗಾಧಿಕಾರಿ ಮಧುಕೇಶ್ವರ, ಜಂಟಿ ಕೃಷಿ ನಿರ್ದೇಶಕ ಕೆಂಪೆಗೌಡ, ತೋಟಗಾರಿಕಾಉಪನಿರ್ದೇಶಕಿ ಕೆ.ಭುವನೇಶ್ವರಿ, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ, ಅರಣ್ಯ ಇಲಾಖೆಯ ಪ್ರಭಾಕರ ಕುಲಾ, ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ ಮೊದಲಾದವರು ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮಂಡಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾನೂನಾತ್ಮಕ ಸಲಹೆ ನೀಡಿ, ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ಯನ್ನು ಜಿಲ್ಲಾಧಿಕಾರಿ ನೀಡಿದರು. ಭಾರತೀಯಕಿಸಾನ್ ಸಂಘದ ಪ್ರತಿನಿಧಿಗಳಾಗಿ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್, ರಾಜ್ಯ ಸಮಿತಿ ಸದಸ್ಯ ಬಿ.ವಿ.ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್, ಜಿಲ್ಲೆಯ ಪ್ರಮುಖರಾದ ಉಮಾನಾಥ ರಾನಡೆ, ಚಂದ್ರಹಾಸ ಶೆಟ್ಟಿ, ಸೀತಾರಾಮ ಗಾಣಿಗ, ಪ್ರಾಣೇಶ್ ಯಡಿಯಾಳ್, ಪಾಂಡುರಂಗ ಹೆಗ್ಡೆ, ಆಸ್ತೀಕ ಶಾಸ್ತ್ರೀ, ಸುಂದರ ಶೆಟ್ಟಿ, ವೆಂಕಟೇಶ್ ರಾವ್, ಮಹಾಬಲ ಬಾಯಾರಿ, ಎಸ್.ಎನ್.ಭಟ್ ಮೊದಲಾದವರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿ ರೈತರ- ಅಧಿಕಾರಿಗಳ ಸಭೆ ಕರೆಯಲು ಜಿಲ್ಲಾಧಿಕಾರಿಗಳು ಸಮ್ಮತಿ ಸೂಚಿಸಿದರು ಎಂದು ಭಾಕಿಸಂನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News