ಬ್ಯಾಂಕ್ ವಿಲೀನೀಕರಣ ನಿಲ್ಲಿಸಿ ನಮ್ಮೂರ ಬ್ಯಾಂಕಿನ ಅಸ್ತಿತ್ವ ಉಳಿಸಿ - ಬಿ.ಎಂ.ಭಟ್

Update: 2019-09-09 15:18 GMT

ಬೆಳ್ತಂಗಡಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಕಾರ್ಪರೇಟ್ ಪರದೋರಣೆಯಿಂದ ಇಂದು ಭಾರತ ಆರ್ಥಿಕ ಬಿಕ್ಕಟ್ಟಿಗೆ ಬಂದು ತಲುಪಿದೆ. ದ.ಕ. ಜಿಲ್ಲೆಯ ಜನತೆ ಕಟ್ಟಿಬೆಳೆಸಿದ ರಾಷ್ಟ್ರೀಕೃತ ಬ್ಯಾಂಕುಗಳನ್ನ  ಯಾವ್ಯಾವುದಕ್ಕೋ ವಿಲೀನ ಮಾಡಿ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆತರುತ್ತಿರುವುದಲ್ಲದೆ ಬ್ಯಾಂಕುಗಳನ್ನ ಬಡವರಿಂದ ದೂರ ಮಾಡಲಾಗುತ್ತಿದೆ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ಹೇಳಿದ್ದಾರೆ.

ಅವರು ಇಂದು ಬೆಳ್ತಂಗಡಿ ಮಿನಿ ವಿಧಾನ ಸೌಧಎದುರು ಬ್ಯಾಂಕು ವಿಲೀನೀಕರಣದ ವಿರುದ್ದ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು.

ನರೇಂದ್ರ ಮೋದಿ ಸರಕಾರದ ದೋರಣೆಯಿಂದ ದೇಶದ ಕೈಗಾರಿಕೆಗಳು ಮುಚ್ಚುತ್ತಿವೆ, ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಹೇಳಿದ ಬಿಜೆಪಿಯ ಆಡಳಿತದಲ್ಲಿ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ಕೇಂದ್ರದ ಬಿಜೆಪಿ ಸರಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿ ಖಾಸಗೀಕರಣ ನಡೆಸುವ ದುರುದ್ದೇಶ ಹೊಂದಿದೆ ಎಂದವರು ಆರೋಪಿಸಿದರು. ದುಡಿಯುವ ಜನ ದೇಶದರಕ್ಷಣೆಗಾಗಿ, ಭಾರತೀಯ ದುಡಿಯುವ ವರ್ಗದರಕ್ಷಣೆಗಾಗಿ ಒಗ್ಗಟ್ಟಿನಿಂದ ಹೋರಾಟಕ್ಕೆ ಸಿದ್ದರಾಗಬೇಕೆಂದು ಕರೆ ನೀಡಿದರು.

ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಅದ್ಯಕ್ಷರಾದ ಎಲ್ ಮಂಜುನಾಥ ಅವರು ಮಾತನಾಡಿ ದೇಶವನ್ನು ದಿವಾಳಿಯಂಚಿಗೆ ಕೊಂಡೊಯ್ಯುತ್ತಿರುವ ಬಿಜೆಪಿಯ ದೋರಣೆಯ ವಿರುದ್ದ ಭಾರತೀಯರು ಒಗ್ಗಟ್ಟಿನಿಂದ ಎದುರಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಪ್ರಾಮಾಣಿಕ, ಧಕ್ಷ ಅದಿಕಾರಿಗಳು ದೇಶದಲ್ಲಿ ಪ್ರಜಾಪ್ರಭುತ್ವ ನಶಿಸುತ್ತಿದೆ ಎಂದು ಹೇಳಿ ರಾಜಿನಾಮೆ ನೀಡುವಂತಹ ವಾತಾವರಣ ಸೃಷ್ಟಿಸಿದ ಕೀರ್ತಿ ನರೇಂದ್ರ ಮೋದಿ ಸರಕಾರಕ್ಕೆ ಎಂದು ಟೀಕಿಸಿದರು. ಜಿಲ್ಲೆಯ ಬ್ಯಾಂಕಿನ ಜೊತೆಗೆ ವಿಶ್ವೇಶ್ವರಯ್ಯ ಸ್ಥಾಪಿಸಿದ ಸ್ಟೇಟ್ ಬ್ಯಾಂಕ್‍ಆಫ್ ಮೈಸೂರು ಬ್ಯಾಂಕನ್ನು ಸ್ಟೇಟ್ ಬ್ಯಾಂಕ್‍ಆಫ್ ಇಂಡಿಯಾಕ್ಕೆ ವಿಲೀನಗೊಳಿಸಿ ಕನ್ನಡದ ಜನತೆಗೆ ದ್ರೋಹವೆಸಗಲಾಗಿದೆ ಎಂದರು 

ಹೋರಾಟದಲ್ಲಿ ಕಾರ್ಮಿಕ ಮುಖಂಡರುಗಳಾದ ನೆಬಿಸಾ, ಜಯರಾಮ ಮಯ್ಯ, ಸಂಜೀವ ನಾಯ್ಕ, ಜಯಶ್ರೀ, ವಿನೋದ, ಶೇಖರ ವೇಣೂರು, ಸುಜಾತ, ಮಹಮ್ಮದ್‍ಅನಸ್, ಶೀಲಾವತಿ ಪಟ್ರಮೆ, ಪುಷ್ಪಾ, ಸವಿತ ಪಟ್ರಮೆ,  ಯುವಜನ ಸಂಘಟನೆಯ ನಾಯಕರಾದ ಧನಂಜಯಗೌಡ, ಯುವರಾಜ್, ಚಂದ್ರಶೇಖರ ಭಟ್ ಮೊದಲಾದವರಿದ್ದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ಲೋಕೇಶ್‍ಕುದ್ಯಾಡಿ ಸ್ವಾಗತಿಸಿ ಕೊನೆಗೆ ರೈತ ಮುಖಂಡರೂ ಪಂಚಾಯತು ಸದಸ್ಯ ಶ್ಯಾಮರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News