ಅಕ್ರಮ ವಲಸಿಗರಿಗೆ ಮುಂಬೈ ಸಮೀಪ ಬಂಧನ ಕೇಂದ್ರ ?

Update: 2019-09-09 15:34 GMT

ಹೊಸದಿಲ್ಲಿ, ಸೆ. 9: ಅಕ್ರಮ ವಲಸಿಗರಿಗೆ ಬಂಧನ ಕೇಂದ್ರ ನಿರ್ಮಾಣ ಮಾಡಲು ಭೂಮಿ ನೀಡುವಂತೆ ಕೋರಿ ಮಹಾರಾಷ್ಟ್ರ ಗೃಹ ಸಚಿವಾಲಯ ನವಿ ಮುಂಬೈಯ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ನೆರುಲ್‌ನಲ್ಲಿ ಎರಡರಿಂದ ಮೂರು ಎಕರೆ ನಿವೇಶನ ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಹಾರಾಷ್ಟ್ರ ಗೃಹ ಸಚಿವಾಲಯ ಪತ್ರ ಬರೆದಿದೆ ಎಂದು ನವಿ ಮುಂಬೈ ಯೋಜನಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯನ್ನು ಆಗಸ್ಟ್ 31ರಂದು ಬಿಡುಗಡೆಗೊಳಿಸಿದ ಎರಡು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಇಂತಹ ಪತ್ರ ಕಳುಹಿಸಿರುವುದನ್ನು ಸಚಿವಾಲಯ ನಿರಾಕರಿಸಿದೆ. ಆದರೆ, ಕೇಂದ್ರ ಸರಕಾರ ಈ ವರ್ಷದ ಆರಂಭದಲ್ಲಿ ನೀಡಿದ ಕಾರ್ಯಸೂಚಿಯಂತೆ ದೇಶದ ಎಲ್ಲ ಪ್ರಮುಖ ವಲಸೆ ಸ್ಥಳಗಳಲ್ಲಿ ಬಂಧನ ಕೇಂದ್ರಗಳನ್ನು ನಿರ್ಮಾಣ ಮಾಡುವ ಅಗತ್ಯ ಇತ್ತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ತಿಂಗಳಿಗಿಂತ ಕಡಿಮೆ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಘೋಷಿಸುವ ಸಾಧ್ಯತೆ ಇದೆ.

ನಗರದಲ್ಲಿ ವಾಸಿಸುವ ಅಕ್ರಮ ವಲಸಿಗರನ್ನು ನಿಗ್ರಹಿಸಲು ಅಸ್ಸಾಂ ಮಾದರಿಯಲ್ಲಿ ಮುಂಬೈಯಲ್ಲಿ ಕೂಡ ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನಕ್ಕೆ ತರುವಂತೆ ಶಿವಸೇನೆ ಆಗ್ರಹಿಸಿತ್ತು. ವಲಯದ ಮೂಲ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸಲು ಅಸ್ಸಾಂನಲ್ಲಿ ಎನ್‌ಆರ್‌ಸಿಯ ಅಗತ್ಯ ಇದೆ. ಅದಕ್ಕಾಗಿ ನಾವು ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಗೆ ಬೆಂಬಲಿಸಿರುವುದು. ಇಲ್ಲಿ ವಾಸಿಸುತ್ತಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೊರಗೆ ಅಟ್ಟಲು ಮುಂಬೈಯಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸುವುದನ್ನು ನಾವು ಬಯಸುತ್ತೇವೆ ಎಂದು ಮುಂಬೈ ದಕ್ಷಿಣದ ಶಿವಸೇನೆ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News