ಉಡುಪಿ: ಸೆ. 13ರಿಂದ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್

Update: 2019-09-09 16:56 GMT

ಉಡುಪಿ, ಸೆ.9: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯು ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಸೆ.13ರಿಂದ 15ರವರೆಗೆ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ ಎಂದು ಕ್ರೀಡಾಕೂಟ ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾಗಳ ಮಾರ್ಗದರ್ಶನದಡಿಯಲ್ಲಿ ಮೂರು ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ ಎಂದರು.

ಕ್ರೀಡಾಕೂಟದಲ್ಲಿ ದಕ್ಷಿಣ ಭಾರತದ 8 ರಾಜ್ಯಗಳಾದ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಕೇರಳ, ತುಮಿಳುನಾಡು, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ಹಾಗೂ ಪಾಂಡಿಚೇರಿಯ ಒಟ್ಟು ಸುಮಾರು 1250 ಕ್ರೀಡಾಪಟು ಗಳು, 150 ತಾಂತ್ರಿಕ ಅಧಿಕಾರಿಗಳು ಹಾಗೂ 100 ಮಂದಿ ಸ್ವಯಂ ಸೇಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಕ್ರೀಡಾಕೂಟದ ಉದ್ಘಾಟನೆ ಸೆ.13ರ ಸಂಜೆ 5:30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೆ ಮುನ್ನ ಜೋಡುಕಟ್ಟೆಯಿಂದ ಮೈದಾನದವರೆಗೆ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಿ.ಕಲ್ಪನಾ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ರಘುಪತಿ ಭಟ್ ತಿಳಿಸಿದರು.

ಕ್ರೀಡಾ ಸ್ಪರ್ಧೆಗಳು ಸೆ.14ರಂದು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭಗೊಳ್ಳಲಿದ್ದು ಒಟ್ಟು 8 ವಿಭಾಗಗಳಲ್ಲಿ 130 ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಪಟುಗಳಿಗೆ ಪಾರದರ್ಶಕವಾದ ತೀರ್ಪು ದೊರೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಕ್ರೀಡಾಕೂಟಕ್ಕೆ ಫೋಟೋ ಫಿನಿಷ್ ವ್ಯವಸ್ಥೆಯನ್ನು ಅಳವಡಿಸ ಲಾಗುತ್ತಿದೆ. ಕ್ರೀಡಾಕೂಟದ ಸಮಾರೋಪ ಸಮಾರಂಭ ಸೆ.15ರ ಸಂಜೆ ನಡೆಯಲಿದೆ ಎಂವರು ವಿವರಿಸಿದರು.

ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ವೀಕ್ಷಕರು ಹಾಗೂ ತಾಂತ್ರಿಕ ಅಧಿಕಾರಿಗಳ ತಂಡ ಸೆ.12ರಂದು ಜಿಲ್ಲೆಗೆ ಆಗಮಿಸಲಿದೆ. ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯದರ್ಶಿ ವಿ.ಕೆ. ವೆಲ್ಸನ್ ಕ್ರೀಡಾಕೂಟ ದ ಮೂರು ದಿವಸಗಳ ಕಾಲ ಇಲ್ಲಿ ಇರಲಿದ್ದಾರೆ.

ಕ್ರೀಡಾಕೂಟದ ಸಂಘಟನೆಗೆ 40ರಿಂದ 50 ಲಕ್ಷ ರೂ.ಖರ್ಚಾಗುವ ಅಂದಾಜಿದ್ದು, ರಾಜ್ಯ ಸರಕಾರದಿಂದ ಗರಿಷ್ಠ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಎಂದರು.

ಕ್ರೀಡಾಕೂಟದ ಯಶಸ್ಸಿಗೆ ತಮ್ಮ ನೇತೃತ್ವದಲ್ಲಿ ಈಗಾಗಲೇ ವಿವಿಧ ಸಮಿತಿ ಗಳನ್ನು ರಚಿಸಲಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸಲಿರುವ ಕ್ರೀಡಾಪಟು ಗಳನ್ನು ಸ್ವಾಗತಿಸಲು ಉಡುಪಿ ರೈಲ್ವೇ ನಿಲ್ದಾಣದಲ್ಲಿ ವಿಶೇಷ ಸ್ವಾಗತ ಕೇಂದ್ರವನ್ನು ತೆರೆಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಎ.ರಘುರಾಮ ನಾಯಕ್, ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಉಪಾಧ್ಯಕ್ಷ ರಾದ ಡಾ.ಕೆಂಪರಾಜ್ ಎಚ್.ಪಿ, ಹರೀಶ್ ಹೆಗ್ಡೆ, ಇತರ ಪದಾಧಿಕಾರಿಗಳಾದ ಮಹೇಶ್ ಠಾಕೂರ್, ದಿನೇಶ್ ಕುಮಾರ್ ಎ., ದೀಪಕ್‌ರಾಮ್ ಬಾಯರಿ, ವುಂಜುನಾಥ ಕಾಮತ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News