ಬಂಟ್ವಾಳದ ಎಸ್‍ವಿಎಸ್ ಕಾಲೇಜಿಗೆ ಮೆಂಟರ್ ಕಾಲೇಜು ಮಾನ್ಯತೆ

Update: 2019-09-09 17:07 GMT

ಬಂಟ್ವಾಳ: ನ್ಯಾಕ್ ಮೌಲ್ಯಮಾಪನದಲ್ಲಿ ಎ-ಗ್ರೇಡ್ ಮಾನ್ಯತೆ ಪಡೆದ ಬಂಟ್ವಾಳದ ಎಸ್‍ವಿಎಸ್ ಕಾಲೇಜಿಗೆ ಯುಜಿಸಿಯಿಂದ ಮೆಂಟರ್ ಕಾಲೇಜು ಎಂಬ ಮಾನ್ಯತೆ ದೊರಕಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

ಉನ್ನತ ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುವ ಭಾರತ ಸರಕಾರದ ಯುಜಿಸಿಯ ಪರಾಮರ್ಶ್ ಯೋಜನೆಯು ನ್ಯಾಕ್ ಮೌಲ್ಯಮಾಪನಕ್ಕೆ ಮುಂದಾಗುವ ಯಾವುದೇ ಕಾಲೇಜುಗಳಿಗೆ ಮಾರ್ಗದರ್ಶನ ನೀಡುವವರೇ, ಎ-ಗ್ರೇಡ್ ಪಡೆದ ಕಾಲೇಜುಗಳಿಗೆ ಅವಕಾಶ ನೀಡುತ್ತದೆ. ವಿಶೇಷವಾದ ಈ ಹೊಣೆಗಾರಿಕೆಯನ್ನು ಯುಜಿಸಿಯ ಈ ಯೋಜನೆಯು ಎಸ್‍ವಿಎಸ್ ಕಾಲೇಜಿಗೆ ಮೊದಲ ಹಂತದಲ್ಲೇ ನೀಡಿದೆ.

ಸೆ. 6ರಂದು ಯುಜಿಸಿಯು ಘೋಷಣೆ ಮಾಡಿದ ಪಟ್ಟಿಯಲ್ಲಿ ರಾಜ್ಯದ 17 ಕಾಲೇಜುಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 4 ಕಾಲೇಜುಗಳು ಆಯ್ಕೆಯಾಗಿವೆ. ಇವುಗಳಲ್ಲಿ ಬಂಟ್ವಾಳ ತಾಲೂಕಿನ ಎಸ್‍ವಿಎಸ್ ಕಾಲೇಜು ಕೂಡ ಒಂದಾಗಿದೆ. ಈ ಹೊಣೆಗಾರಿಕೆ ಪಡೆದ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಮುಂದಾಗುವ ಕಾಲೇಜುಗಳಿಗೆ ಮಾರ್ಗದರ್ಶನ ನೀಡಬೇಕಾಗಿರುತ್ತದೆ. ಇತ್ತೀಚಿಗೆ, ಭಾರತ ಸರಕಾರದ ಬಯೋಟೆಕ್ನಾಲಜಿ ಇಲಾಖೆಯಿಂದ ಸ್ಟಾರ್ ಕಾಲೇಜು ಮಾನ್ಯತೆ ಪಡೆದ ಎಸ್.ವಿ.ಎಸ್. ಕಾಲೇಜಿಗೆ ಮೆಂಟರ್ ಕಾಲೇಜು ಮಾನ್ಯತೆ ದೊರಕಿದ್ದು ಕಾಲೇಜಿನ ಕೀರ್ತಿ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ.

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಮತ್ತು ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ವೈಸ್ ಪ್ರಿನ್ಸಿಪಾಲ್ ಮತ್ತು ಐಕ್ಯೂಎಸಿ ಸಂಯೋಜಕಿ ಡಾ. ಸುಜಾತಾ ಎಚ್.ಆರ್. ಮತ್ತು ಐಕ್ಯೂಎಸಿ ಸಹಾಯಕ ಸಂಯೋಜಕಿ ಅಖಿಲ ಪೈ ಎಚ್. ನೇತೃತ್ವ ವಹಿಸಿದ್ದರು ಎಂದು ಪ್ರಿನ್ಸಿಪಾಲ್ ಡಾ. ಪಾಂಡುರಂಗ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News