ಬಾಬರಿ ಮಸೀದಿ ಧ್ವಂಸ ಪ್ರಕರಣ: ಕಲ್ಯಾಣ್ ಸಿಂಗ್ ಗೆ ಸಮನ್ಸ್ ಕಳುಹಿಸಲು ಕೋರ್ಟ್ ಮೆಟ್ಟಿಲೇರಿದ ಸಿಬಿಐ

Update: 2019-09-10 14:49 GMT

ಲಕ್ನೋ, ಸೆ.10: ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರಿಗೆ ಬಾಬರಿ ಮಸೀದಿ ಧ್ವಂಸ ಪ್ರಕರಣ ಕುರಿತಂತೆ ವಿಚಾರಣೆಗೆ ಸಮನ್ಸ್ ಕಳುಹಿಸುವ ಉದ್ದೇಶದೊಂದಿಗೆ ಸಿಬಿಐ ಸೋಮವಾರ ವಿಶೇಷ ನ್ಯಾಯಾಲಯದ ಕದ ತಟ್ಟಿದೆ.

ರಾಜ್ಯಪಾಲ ಹುದ್ದೆಯಲ್ಲಿ ಐದು ವರ್ಷವಿದ್ದ ನಂತರ 87 ವರ್ಷದ ಕಲ್ಯಾಣ್ ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ  ವಿಚಾರಣೆ ಎದುರಿಸುವುದರಿಂದ ಅವರು ಹೊಂದಿದ್ದ ರಾಜ್ಯಪಾಲರ ಹುದ್ದೆ ಅವರಿಗೆ ಸಾಂವಿಧಾನಿಕ ರಕ್ಷಣೆ ಒದಗಿಸಿತ್ತು.

ಸದ್ಯ ಸಿಂಗ್ ಅವರು ಯಾವುದೇ ಸಂವಿಧಾನಿಕ ಹುದ್ದೆ ಹೊಂದಿಲ್ಲದೇ ಇರುವುದನ್ನು ಖಚಿತಪಡಿಸಿಯೇ ಸಿಬಿಐ ಅವರಿಗೆ ಸಮನ್ಸ್ ಕಳುಹಿಸುವ ಉದ್ದೇಶ ಹೊಂದಿದೆ.

ಅಯೋಧ್ಯೆ ಪ್ರಕರಣದ ವಿಚಾರಣೆ ಪ್ರತಿದಿನ ನಡೆಯುತ್ತಿರುವುದರಿಂದ ಸಿಬಿಐ ಅರ್ಜಿಯನ್ನು ಸೆಪ್ಟೆಂಬರ್ 11ರಂದು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ವಿಚಾರಣೆಯೆದುರಿಸುತ್ತಿರುವ ಇತರ ಮೂವರು ಬಿಜೆಪಿ ನಾಯಕರೆಂದರೆ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ.

ಕಲ್ಯಾಣ್ ಸಿಂಗ್ ಅವರು ಬಾಬರಿ ಮಸೀದಿ ಧ್ವಂಸ ಘಟನೆ ಸಂಭವಿಸಿದಾಗ ಉತ್ತರ ಪ್ರದೇಶದ ಸಿಎಂ ಆಗಿದ್ದರು. ಈ ಪ್ರಕರಣದಲ್ಲಿ ಅವರ ವಿರುದ್ಧ 1993ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು ಎಂದು ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ಸಿಬಿಐ ಹೇಳಿದೆ.

ಅತ್ತ ಕಲ್ಯಾಣ್ ಸಿಂಗ್  ಬಿಜೆಪಿಗೆ ಮರು ಸೇರ್ಪಡೆಯಾಗಿದ್ದು, ತಾವು ಸಕ್ರಿಯ ರಾಜಕಾರಣದಲ್ಲಿರಲು ಬಯಸಿರುವುದರ ಸುಳಿವು ನೀಡಿದ್ದಾರೆ. ಬಾಬರಿ ಮಸೀದಿ ಡಿಸೆಂಬರ್ 6, 1992ರಂದು ಧ್ವಂಸಗೊಂಡ ನಂತರ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News