ಕಾರವಾರ: ಬಾಲಕಿಯ ಅತ್ಯಾಚಾರ ಆರೋಪಿಗೆ ಏಳು ವರ್ಷ ಶಿಕ್ಷೆ

Update: 2019-09-10 08:13 GMT

ಕಾರವಾರ, ಸೆ.10: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಆರೋಪ ಸಾಬೀತಾಗಿದ್ದು ಕಾರವಾರದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿಗೆ 7 ವರ್ಷ ಜೈಲು ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಸಾಕ್ರು ಟಕ್ಕು ಹುಂಬೆ ಶಿಕ್ಷಗೊಳಗಾದ ಆರೋಪಿ.

ಹೊಸಳ್ಳಿ ಗ್ರಾಮದ 17 ವರ್ಷ ಪ್ರಾಯದ ಬಾಲಕಿಯನ್ನು ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಎಸಗಿದ್ದರಿಂದ ಸಂತ್ರಸ್ತೆ ಗರ್ಭಿಣಿಯಾಗಿರುವ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯಲ್ಲಾಪುರ ಪಿ.ಎಸ್.ಐ.ಗಳಾದ ವಿಜಯ ಬಿರಾದಾರ ಹಾಗೂ ಶ್ರೀಧರ ಎಸ್.ಆರ್. ತನಿಖೆ ನಡೆಸಿ ಐ.ಪಿ.ಸಿ. ಕಲಂ 376 (2) (ಎನ್), ಮತ್ತು ಕಲಂ-5(ಐ) ಮತ್ತು 6 ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ 376 (2) (ಎನ್) ರ ಅಡಿಯಲ್ಲಿ 7 ವರ್ಷ ಜೈಲುಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದೆ.

ಇದಲ್ಲದೆ ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ ರೂ. 50,000 ವನ್ನು ಪರಿಹಾರ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸುಭಾಶ ಪಿ. ಕೈರನ್ನ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News