ಮುಂದೆ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು: ಸೆಂಥಿಲ್ ರಾಜೀನಾಮೆ ಬಗ್ಗೆ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ

Update: 2019-09-10 14:25 GMT

ಉಡುಪಿ, ಸೆ.10: ‘ಇಂದು ಪ್ರಧಾನಿ ನರೇಂದ್ರ ಮೋದಿ ನಿಲುವು ವಿರೋಧಿಸಿ ರಾಜೀನಾಮೆ ನೀಡಿದ್ದೀರಿ. ಮುಂದೆ ನೀವು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬೇಕಾಗುತ್ತೆ. ಅಂತಹ ನಿರ್ಧಾರಗಳನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ’ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಇತ್ತೀಚೆಗೆ ರಾಜೀನಾಮೆ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಶ್ಮೀರ, ತ್ರಿವಳಿ ತಲಾಕ್ ಸೇರಿದಂತೆ ಹಲವು ವಿಚಾರಗಳ ಕುರಿತು ಕೇಂದ್ರ ಸರಕಾರ ಹಾಗೂ ಮೋದಿಯ ನಿರ್ಧಾರವನ್ನು ಇಡೀ ಜಗತ್ತೆ ಒಪ್ಪಿಕೊಂಡು ಬೆಂಬಲಿಸುತ್ತಿ ರುವ ಸಂದರ್ಭದಲ್ಲಿ ದ.ಕ. ಜಿಲ್ಲಾಧಿಕಾರಿ, ಅದನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ ಎಂದರು.

ಕಾಶ್ಮೀರ, 370ನೆ ವಿಧಿ ರದ್ಧತಿ, ರಾಮಮಂದಿರ ವಿಚಾರದಲ್ಲಿ ನನಗೆ ಸಮಾಧಾನ ಆಗಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ. ಮೋದಿ ಹಲವು ಮಸೂದೆಗಳನ್ನು ಜಾರಿಗೊಳಿಸುವ ಮೂಲಕ ಹಾಗೂ ನಿರ್ಧಾರಗಳನ್ನು ತೆಗೆದು ಕೊಳ್ಳುವ ಮೂಲಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ರಾಜೀನಾಮೆ ನೀಡಿದ ಜಿಲ್ಲಾಧಿಕಾರಿ ಹಾಗೂ ಅಂತಹ ಮಾನಸಿಕತೆ ಇರುವ ವ್ಯಕ್ತಿಗಳಿಗೆ ನಾನು ಹೇಳುತ್ತೇನೆ. ನಾವು ಕೇವಲ 370ನೆ ವಿಧಿ ರದ್ಧತಿ ಮಾತ್ರವಲ್ಲ ಪಿಒಕೆಗೂ ಪ್ರವೇಶ ಮಾಡುತ್ತೇವೆ ಮತ್ತು ರಾಮ ಮಂದಿರವನ್ನು ಕೂಡ ಕಟ್ಟು ತ್ತೇವೆ. ಇವತ್ತು ನರೇಂದ್ರ ಮೋದಿಯ ನಿಲುವು ವಿರೋಧಿಸಿ ರಾಜೀನಾಮೆ ನೀಡಿದ್ದೀರಿ. ಮುಂದೆ ನೀವು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬೇಕಾಗುತ್ತೆ. ಅಂತಹ ನಿರ್ಧಾರಗಳನ್ನು ಕೇಂದ್ರ ಸರಕಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ ಯಾವುದೊ ರಾಜಕೀಯ ಪಕ್ಷದಲ್ಲಿ ಚುನಾವಣೆ ನಿಲ್ಲ ಬೇಕೆಂಬ ಕಾರಣಕ್ಕಾಗಿ ದೇಶದ ವ್ಯವಸ್ಥೆಯನ್ನು ಪ್ರಶ್ನೆ ಮಾಡಬೇಡಿ. ಇಡೀ ಜಗತ್ತು ಭಾರತ ನಿಲುವು ಮತ್ತು ಇಡೀ ಭಾರತ ನರೇಂದ್ರ ಮೋದಿಯವರ ನಿಲುವನ್ನು ಒಪ್ಪಿಕೊಂಡಿದೆ. ಕೇವಲ ಒಬ್ಬ ಜಿಲ್ಲಾಧಿಕಾರಿ ರಾಜೀನಾಮೆ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಕಾಶ್ಮೀರ ಹಾಗೂ 370ನೆ ವಿಧಿ ಕುರಿತಂತೆ ಪಕ್ಷದ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುನೀಲ್ ಕುಮಾರ್ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News