ಪಜೀರಿನಲ್ಲಿ ಮಳೆಗೆ ಭಾರೀ ಭೂಕುಸಿತ: ನೂರಾರು ಎಕರೆ ಕೃಷಿ ಜಮೀನಿಗೆ ನುಗ್ಗಿದ ನೀರು

Update: 2019-09-10 12:26 GMT

ಕೊಣಾಜೆ: ಪಜೀರು ಗ್ರಾಮ ಪಂ. ವ್ಯಾಪ್ತಿಯ ತದ್ಮ ಮುರಾಯಿ ಎಂಬಲ್ಲಿ  ಭಾರೀ ಮಳೆಯಿಂದಾಗಿ  ಗುಡ್ಡ ಪ್ರದೇಶವೊಂದು ನೀರು ಹರಿಯುವ ತೋಡುವಿಗೆ ಕುಸಿದು ಬಿದ್ದ ಪರಿಣಾಮ ನೀರು ಕೃಷಿ ಪ್ರದೇಶಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಗಮಿಸಿ ಪರಿಶೀಲನೆ ನಡೆಸಿದರು.

ಪಜೀರು ತದ್ಮ ಕೇದಗೆಬೈಲ್ ಸಮೀಪದ ಕೋಟೆ ಪ್ರದೇಶದ ಗುಡ್ಡ ಪ್ರದೇಶವು ಸೋಮವಾರದಂದು ಕುಸಿದು ಬಿದ್ದಿದೆ. ಮಣ್ಣು ಕುಸಿದು ಬಿದ್ದ ಪರಿಣಾಮ ಇಲ್ಲಿ ನೀರು ಹರಿಯುವ ತೋಡು ಸಂಪೂರ್ಣವಾಗಿ ಬ್ಲಾಕ್ ಆದ ಕಾರಣ ನೀರು ತೋಟ, ಗದ್ದೆಯ ಮೂಲಕ ಹರಿದು ಸುಮಾರು 200 ಎಕರೆ ಕೃಷಿ ಪ್ರದೇಶವು ಜಲಾವೃತವಾಗಿದೆ. ಇದರಿಂದ ಅಡಿಕೆಮರ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ನೀರು ತುಂಬಿ ಅಪಾರ ಕೃಷಿ ಹಾನಿ ಸಂಭವಿಸಿದೆ. ಅಲ್ಲದೆ ಹಲವಾರು ಮನೆಗಳು ಕೂಡಾ ಜಲಾವೃತಗೊಂಡಿದೆ.

ಈ ಪ್ರದೇಶಕ್ಕೆ ಸರಿಯಾದ ರಸ್ತೆಯ ವ್ಯವಸ್ಥೆಯೂ  ಇಲ್ಲದಿರುವುದರಿಂದ ನೀರು ಹರಿಯುವ ತೋಡಿಗೆ ಬಿದ್ದ ಗುಡ್ಡ ಪ್ರದೇಶದ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆಗೆಯುವುದು ಕೂಡಾ ಕಷ್ಟಸಾಧ್ಯವಾಗಿದೆ. ಇನ್ನು 15 ದಿನಗಳ ಕಾಲ ಇದೇ ರೀತಿ ತೋಡಲ್ಲಿ ನೀರು ಹರಿದರೆ ಇಲ್ಲಿಯ ತೋಟಗಳ ಅಡಿಕೆ ಮರಗಳಿಗೆ ಹಾನಿಯಾಗಲಿದೆ. ಅಲ್ಲದೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಅಪಾರ ನಷ್ಟ ಸಂಭವಿಸಿದೆ. ಅದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೃಷಿಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಯು.ಟಿ. ಖಾದರ್ ಭೇಟಿ

ಭೂಕುಸಿತ ಉಂಟಾಗಿರುವ ಪಜೀರು ಗ್ರಾಮದ ಕೇದಗೆಬೈಲ್ ಪ್ರದೇಶಕ್ಕೆ ಶಾಸಕ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಗುಡ್ಡ ಕುಸಿದು ನೀರು ಹರಿಯುವ ತೋಡು ಬ್ಲಾಕ್ ಆಗಿರುವುದರಿಂದ ನೀರು ಇದೀಗ ಕೃಷಿಕರ ಜಮೀನು ಮೂಲಕ ಹರಿಯುತ್ತದೆ. ಇದೀಗ ಕೂಡಲೇ ಮಣ್ಣು ತೆರವುಗೊಳಿಸಿ ನೀರು ಹರಿದುಹೋಗುವ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೀರು ತುಂಬಿರುವುದರಿಂದ ಈಗಾಗಲೇ  ಕೃಷಿ ಪ್ರದೇಶ ನಾಶವಾಗಿದ್ದು ಬೆಲೆ ಪರಿಹಾರದ ಬಗ್ಗೆಯೂ ಚರ್ಚಿಸಲಾಗುವುದು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ, ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಜೀರು ಗ್ರಾಮ ಪಂ. ಅಧ್ಯಕ್ಷ ಸೀತರಾಮ ಶೆಟ್ಟಿ,  ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ, ಇಂತಿಯಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಅಬ್ದುಲ್ ಜಲೀಲ್ ಮೊಂಟುಗೋಳಿ, ನಾಸೀರ್ ನಡುಪದವು, ಪಂಚಾಯಿತಿ ಸದಸ್ಯರಾದ ಶಾಫಿ, ಫ್ಲೋರಿನ್ ಡಿಸೋಜ, ಜಗನ್ನಾಥ್ ಪೂಂಜ, ಸಮೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News