ಜಾಗತಿಕ ಬಂಡವಾಳಶಾಹಿಗಳಿಂದ ದೇಶದ ರಾಜಕೀಯ ಶಕ್ತಿಗಳ ಖರೀದಿ: ಮೀನಾಕ್ಷಿ ಸುಂದರಂ

Update: 2019-09-10 15:59 GMT

ಕುಂದಾಪುರ, ಸೆ.10: ಜಾಗತಿಕ ಹಣಕಾಸು ಬಂಡವಾಳ ತನ್ನ ರಾಜಕೀಯ ಶಕ್ತಿಯನ್ನು ಉಪಯೋಗಿಸಿಕೊಂಡು ಭಾರತದ ಸಾರ್ವಜನಿಕ ರಂಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ದೇಶದ ರಾಜಕೀಯ ಶಕ್ತಿಗಳನ್ನು ಖರೀದಿಸಿದೆ. ನಮ್ಮ ಆಳುವ ವರ್ಗಗಳು ವಿದೇಶಿ ಹಣಕಾಸು, ರಾಜಕೀಯ ಒತ್ತಡಗಳಿಗೆ ಸ್ವಯಂ ಪ್ರೇರಣೆಯಿಂದ ಬಲಿಯಾಗಿ ನಮ್ಮ ಉತ್ಪಾದನಾ ವ್ಯವಸ್ಥೆಗೆ ದಕ್ಕೆ ತರುತ್ತಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಟೀಕಿಸಿದ್ದಾರೆ.

ಸಿಐಟಿಯು ಉಡುಪಿ ಜಿಲ್ಲಾ ಆರನೆ ಸಮ್ಮೇಳನದ ಅಂಗವಾಗಿ ಸೋಮವಾರ ಕುಂದಾಪುರ ಕಾರ್ಮಿಕ ಭವನದಲ್ಲಿ ಆಯೋಜಿಸಲಾದ ಬಹಿರಂಗ ಸಭೆಯನ್ನು ದ್ಧೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ ವಸೂಲಿಯಿಂದ ದೇಶದ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರಚಾರ ಮಾಡಿದ ಕೇಂದ್ರ ಸರಕಾರ, ಇದೀಗ ಶೇ.65ರಷ್ಟು ಮಾತ್ರ ತೆರಿಗೆ ವಸೂಲಾಗಿದೆ ಎಂದು ಹೇಳುತ್ತಿದೆ. ತೆರಿಗೆ ವಂಚಿಸಿದವರು ಕೋಟ್ಯಾಧಿಪತಿಗಳೆ ಹೊರತು ಕಾರ್ಮಿಕರಲ್ಲ ಎಂದರು.

ಕೇಂದ್ರ ಸರಕಾರದ ಬಳಿ ಹಣ ಇಲ್ಲ ಎಂದು ಹೇಳಿ ಆರ್‌ಬಿಐಯಲ್ಲಿರುವ 1.76 ಲಕ್ಷ ಕೋಟಿ ರೂ.ಗಳನ್ನು ಕಿತ್ತುಕೊಂಡಿದ್ದು, ಮುಂದೆ ಎಲ್ಲ ಕಾರ್ಮಿಕ ಕಾನೂನುಗಳನ್ನು ಕಿತ್ತುಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಆದುದರಿಂದ ಇದರ ವಿರುದ್ಧ ರಕ್ಷಣಾತ್ಮಕ ಹೋರಾಟ ಮಾಡುವುದರ ಬದಲಿಗೆ ಆಕ್ರಮಣಕಾರಿ ಹೋರಾಟಕ್ಕೆ ಕ್ರಾಂತಿಕಾರಿ ಸಂಘಟನೆ ಕಟ್ಟಲು ಮುಂದಾಗಬೇಕೆಂದು ಅವರು ತಿಳಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಚಿದಂಬರಂ, ಡಿ.ಕೆ.ಶಿವಕುಮಾರ್ ರನ್ನು ಜೈಲಿಗೆ ಕಳಿಸುವ ಬಿಜೆಪಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋದ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುತ್ತದೆ. ಮೋದಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ದೇಶದ ರಿಲಯನ್ಸ್ ಸೇರಿದಂತೆ ಕೆಲವು ಖಾಸಗಿ ಕಂಪೆನಿಗಳಿಗೆ ಜನರ ಹಣ ಲೂಟಿಗೆ ಅವಕಾಶ ಮಾಡಿಕೊಟ್ಟಿರುವುದು ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿ ಗಳಾಗಿ 15 ಮಂದಿ ಸದಸ್ಯರನ್ನು ಒಳಗೊಂಡ 42 ಮಂದಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಶಂಕರ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಕಲ್ಲಾಗ್ ಅವರನ್ನು ಆಯ್ಕೆ ಮಾಡ ಲಾಯಿತು.

ಅಧ್ಯಕ್ಷತೆಯನ್ನು ಸಿಐಟಿಯು ಅಧ್ಯಕ್ಷ ಪಿ.ವಿಶ್ವನಾಥ ರೈ ವಹಿಸಿದ್ದರು. ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಪಿ.ವಿಶ್ವನಾಥ ರೈ, ಗಣೇಶ ತೊಂಡೆಮಕ್ಕಿ, ಶಶಿಧರ ಗೊಲ್ಲ, ಮಹಾಬಲ ವಡೇರಹೋಬಳಿ, ಬಲ್ಕೀಸ್, ಶೇಖರ ಬಂಗೇರ, ಸುನಂದ, ಉಮೇಶ ಕುಂದರ್, ಭಾರತಿ, ಸಂತೋಷ ಹೆಮ್ಮಾಡಿ, ಕವಿರಾಜ್ ಉಪಸ್ಥಿತರಿದ್ದರು. ಸುರೇಶ್ ಕಲ್ಲಾಗರ್ ಸ್ವಾಗತಿಸಿದರು. ಎಚ್.ನರಸಿಂಹ ವಂದಿಸಿದರು.

ಸಿಐಟಿಯು ಜಿಲ್ಲಾ ಸಮ್ಮೇಳನದಲ್ಲಿ ನಿರ್ಣಯಗಳು

ಮರಳು ಲಭ್ಯತೆಗಾಗಿ ಒತ್ತಾಯಿಸಿ ಸೆ.23ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ಧಿಷ್ಟಾವಧಿ ಧರಣಿ, ಹಂಚು ಉದ್ಯಮ ಹಾಗೂ ಕಾರ್ಮಿಕರನ್ನು ರಕ್ಷಿಸಲು ಒತ್ತಾಯ, ಬೀಡಿ ಕಾರ್ಮಿಕರ ಕನಿಷ್ಠಕೂಲಿ ಮತ್ತು 2015ರ ತುಟ್ಟಿಭತ್ಯೆ ಪಡೆಯಲು ಕಾನೂನುಬದ್ಧ ಹೋರಾಟ ಮತ್ತು ಚಳವಳಿ, ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಖಾಯಂಗೊಳಿಸಲು ಆಗ್ರಹ, ಸಾರ್ವಜನಿಕ ರಂಗವನ್ನು ಬಲಪಡಿಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಒತ್ತಾಯ, 1996 ರ ಕಟ್ಟಡ ಕಾರ್ಮಿಕರ ಕಾನೂನು, ಸೆಸ್ ಕಾನೂನು ರದ್ದತಿ ವಿರೋಧಿಸಿ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News