'ಕೇಂದ್ರ, ರಾಜ್ಯ ಸರ್ಕಾರಕ್ಕೆ ಕಿವಿ ಕೇಳುವುದಿಲ್ಲ, ಬಾಯಿ ಬರುವುದಿಲ್ಲ, ಕಣ್ಣು ಕಾಣುವುದಿಲ್ಲ'

Update: 2019-09-11 11:25 GMT

ಬಂಟ್ವಾಳ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್‍ನಿಂದ ಮಾಣಿ ಜಂಕ್ಷನ್ ತನಕ ರಸ್ತೆಯು ಸಂಪೂರ್ಣ ಹದೆಗೆಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನಾ ಪಾದಯಾತ್ರೆಗೆ ಬುಧವಾರ ಮೆಲ್ಕಾರ್ ನಿಂದ ಚಾಲನೆ ನೀಡಲಾಯಿತು.

ವಾಹನ ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಕೇಂದ್ರ, ರಾಜ್ಯ ಸರಕಾರವಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾವುದೇ ರೀತಿಯ ಗಮನಹರಿಸದ್ದು ಖಂಡನೀಯ ಎಂದು‌ ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಂಸದರು ಕೇವಲ ಓಟಿಗಾಗಿ ನಾಟಕ ಮಾಡುತ್ತಿದ್ದಾರೆ. ಇದರಿಂದಲೇ ಹೆದ್ದಾರಿ ಹದಗೆಟ್ಟು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆದ್ದಾರಿ ಚತುಷ್ಪಥದ ಕಾಮಗಾರಿ ಅರ್ಧಕ್ಕೆ ನಿಂತಿದ್ದು,  ಬಿಜೆಪಿ ಜನಪ್ರತಿನಿಧಿಗಳು ಮತ್ತು ಗುತ್ತಿಗೆ ಕಂಪೆನಿಗಳ ನಡುವಿನ ಶೀತಲ ಸಮರವೇ ಇದಕ್ಕೆ ಕಾರಣ. ಆದರೆ ಭೂಸ್ವಾಧೀನ ಪ್ರಕ್ರಿಯೆಯ ವಿಳಂಬ ಎಂಬ ಕಾರಣವನ್ನು ನೀಡಲಾಗುತ್ತಿದೆ, ಚತುಷ್ಪಥ ಕಾಮಗಾರಿ‌ ಅರ್ಧಕ್ಕೆ ನಿಂತಿರುವುದಕ್ಕೆ ಇದುವೇ ನೈಜ ಕಾರಣವಾಗಿದ್ದರೆ, ತಾನು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಅವರು ಘೋಷಿಸಿದರು.

ತಾನು ಅಧಿಕಾರದಲ್ಲಿದ್ದಾಗ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವಂತಾ ಕೆಲಸ ಆಗಿತ್ತು. ಮೆಲ್ಕಾರ್ ನ ರಸ್ತೆಯ ಅಗಲೀಕರಣದಿಂದ‌ ತೊಡಗಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಆದರೆ ಇದೀಗ ಹೆದ್ದಾರಿಯೇ ಹದಗೆಟ್ಟಿದ್ದರೂ ಬಿಜೆಪಿಯ ಜನಪ್ರತಿನಿಧಿಗಳು ನಿದ್ದೆಯಲ್ಲಿದ್ದಾರೆ ಎಂದರು.

ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ, ಓಟುಗಿಟ್ಟಿಸುವುದೇ ಬಿಜೆಪಿಯ ಹವ್ಯಾಸ ಎಂದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆದ ಕಾಮಗಾರಿಯನ್ನು ಬಿಜೆಪಿ ಪ್ರಧಾನಿಗೆ ಪತ್ರ ಬರೆದು ಪ್ರಚಾರ ಗಿಟ್ಟಿಸಿತ್ತು. ಇದೀಗ ಹೆದ್ದಾರಿ ಹದಗೆಟ್ಟಿದ್ದರೂ, ಯಾರೂ ಯಾಕೆ ಪತ್ರ ಬರೆಯುತ್ತಿಲ್ಲ, ಅವರ ಪೆನ್ನಿನಲ್ಲಿ ಶಾಯಿ ಮುಗಿದಿದೆಯೇ ಎಂದು ವ್ಯಂಗ್ಯ ವಾಡಿದ  ರೈ, ಈ ಕೂಡಲೇ ಪ್ರತಿಯೊಬ್ಬರೂ, ಮೋದಿಗೆ ಪತ್ರ ಬರೆಯಬೇಕು. ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲು ಅವರಿಂದ ಹೆದ್ದಾರಿ ಮುತುವರ್ಜಿ ಸಾಧ್ಯವಿಲ್ಲ. ಹಾಗಾಗಿ ಬೇಗ ಹೆದ್ದಾರಿ ದುರಸ್ಥಿ ಮಾಡಿ ಎಂದು ಪ್ರಧಾನಿಗೆ ಪತ್ರ ಬರೆಯುವಂತೆ ಅವರು ಕರೆ ನೀಡಿದರು.

'ಮೇಲೆ ನೋಡಿ ಓಟು ಕೊಟ್ಟು ಕೆಟ್ಟಿದ್ದಾರೆ'

ಲೋಕಸಭಾ ಚುನಾವಣೆಯಲ್ಲಿ  ನಳಿನ್ ಕುಮಾರ್ ಕಟೀಲು ಮುಖ ನೋಡಬೇಡಿ, ಮೇಲೆ ನೋಡಿ ಓಟು ಕೊಡಿ ಎಂದು ಬಿಜೆಪಿ ಪ್ರಚಾರ ನಡೆಸಿತ್ತು. ಆದರೆ ಅವರ ಮಾತು ನಂಬಿ ಇದೀಗ ಮೇಲೆ‌ ನೋಡಿದವರೆಲ್ಲಾ ಇದೀಗ ಕೆಳಗೆ ನೋಡಬೇಕಾದ ಕಾಲ ಎದುರಾಗಿದೆ ಎಂದವರು ಟೀಕಿಸಿದರು.

ಪ್ರಧಾನಿ ಮಂತ್ರಿಯನ್ನು ಟೀಕಿಸಿದವರ  ಮೇಲೆ ದೇಶದ್ರೋಹದ ಆರೋಪ ಹೊರಿಸುವವರು, ಮಹಾತ್ಮಾ ಗಾಂಧಿ, ಇಂದಿರಾಗಾಂಧಿ, ನೆಹರೂ ರವರನ್ನು ಟೀಕಿಸುವವರನ್ನು ಏನನ್ನಬೇಕು ಎಂದ ಅವರು, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜನತೆಯ ಪ್ರಾಣದ ಜೊತೆ ಚೆಲ್ಲಾಟ ವಾಡದೆ ನೈಜ ಕಾಳಜಿಯಿಂದ ಕೆಲಸ ಮಾಡಬೇಕು. ಎಲ್ಲಾ ರಸ್ತೆಗಳ ತೇಪೆ ಮಾತ್ರವಲ್ಲ, ಸಂಪೂರ್ಣ ದುರಸ್ತಿ ಮಾಡಬೇಕು ಎಂದು ರೈ ಆಗ್ರಹಿಸಿದರು.

ಕೇಂದ್ರ , ರಾಜ್ಯ ಸರ್ಕಾರಕ್ಕೆ ಕಿವಿ ಕೇಳುದಿಲ್ಲ, ಬಾಯಿ ಬರುದಿಲ್ಲ, ಕಣ್ಣು ಕಾಣುದಿಲ್ಲ ಎಂದ ಅವರು, ಸರ್ಕಾರ ಬೇಗ ಕಣ್ಣು ತೆರೆಯುವಂತಾಗಬೇಕು ಎಂದು ಆಗ್ರಹಿಸಿದರು.

ಬಳಿಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಎಂ.ಎಲ್.ಸಿ.ಹರೀಶ್ ಕುಮಾರ್  ಮಾತನಾಡಿದರು. 

ಪ್ರಮುಖರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಮಂಜುಳಾ ಮಾದವ ಮಾವೆ, ಸುದರ್ಶನ ಜೈನ್, ಚಂದ್ರಹಾಸ ಕರ್ಕೇರ,  ಅಬ್ಬಾಸ್ ಆಲಿ, ಧನಲಕ್ಮೀ ಸಿ.ಬಂಗೇರ, ಸದಾಶಿವ ಬಂಗೇರ , ಪರಮೇಶ್ವರ ಮೂಲ್ಯ, ಸಿದ್ದೀಕ್ ಗುಡ್ಡೆಯಂಗಡಿ, ಶರೀಫ್, ಸಿದ್ದೀಕ್ ನಂದಾವರ, ವೆಂಕಪ್ಪ ಪೂಜಾರಿ, ಕಾಂಚಲಾಕ್ಷೀ, ಚಿತ್ತರಂಜನ್ ಶೆಟ್ಟಿ,  ಶರೀಫ್ ಶಾಂತಿಅಂಗಡಿ, ಪ್ರಶಾಂತ್, ಲುಕ್ಮಾನ್, ಮುಹಮ್ಮದ್ ನಂದರಬೆಟ್ಟು, ಮಹೇಶ್, ಜೆಡಿಎಸ್ ಮುಖಂಡರಾದ ಮುಹಮ್ಮದ್ ಶಫಿ, ಪಿ.ಎ.ರಹೀಂ, ಹಾರೂನ್ ರಶೀದ್ ಹಾಜರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಮಾಣಿ ಕಾರ್ಯಕ್ರಮ ನಿರೂಪಿಸಿದರು.

ಮೆಲ್ಕಾರ್ ಜಂಕ್ಷನ್ ಬಳಿಯ ಹೆದ್ದಾರಿಯ ನೀರು ನಿಂತ ಹೊಂಡದಲ್ಲಿ ಬಾಳೆಯ ಗಿಡನೆಟ್ಟು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರ ಭಾವಚಿತ್ರ ಅಳವಡಿಸಿದರು. ಬಳಿಕ ಹೊಂಡದ ಕೆಸರು ನೀರಿನಲ್ಲಿ ಇಬ್ಬರ ಭಾವಚಿತ್ರಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಸ್ನಾನ ಮಾಡಿಸಿ, ಚಪ್ಪಲಿಯಿಂದ ಹೊಡೆದರು. 

ಹದಗೆಟ್ಟ ರಸ್ತೆಯ ದುರಸ್ಥಿಯಾಗುವವರೆಗೆ ಟೋಲ್ ಶುಲ್ಕವನ್ನು ನಿಲ್ಲಿಸಬೇಕು. ಅದೇ ರೀತಿ ಮೋಟಾರ್ ಕಾಯ್ದೆಯನ್ನು ತಾತ್ಕಾಲಿಕ ತಡೆ ನೀಡಬೇಕು.

-ಹರೀಶ್ ಕುಮಾರ್, ಎಂಎಲ್‍ಸಿ  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News