ಪಾದುವ ಕಾಲೇಜಿನಲ್ಲಿ 'ದ್ವೀಪ', 'ದಿ ಲೀಡರ್' ನಾಟಕ ಪ್ರದರ್ಶನ

Update: 2019-09-11 11:08 GMT

ಮಂಗಳೂರು: ಆಯನ ನಾಟಕದ ಮನೆ ವತಿಯಿಂದ ಪಾದುವ ಕಾಲೇಜಿನ ಆಪ್ತ ರಂಗಮಂದಿರದಲ್ಲಿ 'ದ್ವೀಪ' ಹಾಗೂ 'ದಿ ಲೀಡರ್' ಎಂಬ ಎರಡು ನಾಟಕಗಳನ್ನು  ಪ್ರದರ್ಶಿಸಿದರು.

ಸುಮಾರು ಮೂರು ದಶಕಗಳ ಬಳಿಕ ಮತ್ತೊಮ್ಮೆ ಆಯನ ನಾಟಕದ ಮನೆ ತನ್ನ ಪುನರುತ್ಥಾನವನ್ನು ಸಾರಿತು. ದ್ವೀಪ ನಾಟಕ ಮೂಲವಾಗಿ ಅಥೋಲ್ ಫ್ಯೂಗಾರ್ಡ್ ಬರೆದು ಎಸ್. ಆರ್. ರಮೇಶ್ ರೂಪಾಂತರಗೊಳಿಸಿದ್ದರೆ, ನಾಟಕದಲ್ಲಿ ಬರುವ ಎರಡೇ ಎರಡು ಪಾತ್ರಗಳನ್ನು ಚಂದ್ರಹಾಸ್ ಉಳ್ಳಾಲ್ ಹಾಗೂ ಪ್ರಭಾಕರ್ ಕಾಪಿಕಾಡ್  ನಿರ್ವಹಿಸಿದರು.

ಎರಡನೇ ದಿನದ ನಾಟಕ 'ದಿ ಲೀಡರ್' ಮೂಲವಾಗಿ ಯುಜಿನ್ ಅಯನೆಸ್ಕೊ ರಚಿಸಿ ನಾಟ್ಕದ ಕೆ.ಪಿ.‌ಲಕ್ಷ್ಮಣ್ ರೂಪಾಂತರಿಸಿದ್ದರು. ಲೀಡರ್ ನಾಟಕದಲ್ಲಿ ಮಯೂರಿ ಬೋಳಾರ್, ದಿವಾಕರ್ ಬಲ್ಲಾಳ್, ತನುಶ್ರೀ ಮೋನಪ್ಪ, ಆಝಾದ್ ಕಂಡಿಗ, ಮಧ್ವ ನೀನಾಸಂ, ಭರತ್ ಕರ್ಕೇರ, ಶ್ರೀನಿವಾಸ ಕುಪ್ಪಿಲ, ಸೋಮನಾಥ, ಹರೀಶ್ ಕಾನೆಕೋಡಿ, ನಟರಾಜ್ ಅತ್ತಾವರ, ಕಮಲಾಕ್ಷ ಬಜಾಲ್, ದಂಡ್ಯಪ್ಪ ಮಾಳ್ಗಿ, ಶಾರದ ಕಾಪಿಕಾಡ್, ಚಂದ್ರಹಾಸ ಉಳ್ಳಾಲ್ ಮತ್ತು ಪ್ರಭಾಕರ್ ಕಾಪಿಕಾಡ್ ಮುಂತಾದ ಕಲಾವಿದರು ನಟಿಸಿದರು.

ಈ ಎರಡೂ ನಾಟಕಗಳಿಗೆ ಕೆ.ಪಿ.ಲಕ್ಷ್ಮಣ್ ಇವರು ನಿರ್ದೇಶನ‌ ನೀಡಿದ್ದರು. ತಾಂತ್ರಿಕ ವರ್ಗದಲ್ಲಿ ಚಂದ್ರು ತಿಪಟೂರು, ಮಧ್ವ ನೀನಾಸಮ್ ಹಾಗೂ ಕ್ರಿಸ್ಟಿ ನೀನಾಸಮ್ ಸಹಕಾರ ನೀಡಿದ್ದರು. ಎರಡೂ ನಾಟಕಗಳ ನಿರ್ಮಾಣ ನಿರ್ವಹಣೆಯ ಜವಾಬ್ದಾರಿಯನ್ನು ಆಯನ‌ ನಾಟಕದ ಮನೆಯ ಶ್ಯಾಮ್ ಸುಂದರ ರಾವ್ ಹಾಗೂ ಮೋಹನಚಂದ್ರ ವಹಿಸಿದ್ದರು.

ಎರಡನೇ ದಿನದ ನಾಟಕದ ಬಳಿಕ ಪ್ರೇಕ್ಷಕರ ಜೊತೆ ನಡೆದ ಸಂವಾದದಲ್ಲಿ ಹಲವು ರಂಗಾಸಕ್ತರು ತಮ್ಮ ಅಭಿಪ್ರಾಯ ಮಂಡಿಸಿದರು. ಅದರಲ್ಲೂ ಅನೇಕ ಯುವ ರಂಗಾಸಕ್ತರು ಮುಕ್ತವಾಗಿ ವಿಚಾರ ವಿನಿಮಯ ಮಾಡಿಕೊಂಡದ್ದು, ಹಾಗೆಯೇ ಪ್ರೇಕ್ಷಕ ವರ್ಗದಲ್ಲಿ ಅನೇಕ ಯುವಜನರೇ ಕಾಣಿಸಿಕೊಂಡದ್ದು ಮಂಗಳೂರಿನ ರಂಗಭೂಮಿಗೆ ಒಂದು ಉತ್ತಮ ಬೆಳವಣಿಗೆಗೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಎರಡೂ ನಾಟಕಗಳಿಗೆ ಪಾದುವ ರಂಗ ಅಧ್ಯಯನ ಕೇಂದ್ರ ಹಾಗೂ ತಾಂತ್ರಿಕ ವರ್ಗದಲ್ಲಿ ಆಹಾರ್ಯಂ ಸಹಕಾರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News