ಅಭಿವೃದ್ಧಿ ಜೊತೆ ಅರಣ್ಯ ಉಳಿಸುವುದು ದೊಡ್ಡ ಸವಾಲು: ಕಮಲ ಕೆ

Update: 2019-09-11 12:40 GMT

ಉಡುಪಿ, ಸೆ.11: ಅಭಿವೃದ್ಧಿ ಹೊಂದುತ್ತಿರುವ ಇಂದಿನ ಜಗತ್ತಿನಲ್ಲಿ ಅರಣ್ಯ ವನ್ನು ಉಳಿಸುವುದು ದೊಡ್ಡ ಸವಾಲು ಆಗಿದೆ. ಮುಂದಿನ ಪೀಳಿಗೆಗೆ ಹಣ, ಆಸ್ತಿಗಿಂತ ಒಳ್ಳೆಯ ಪ್ರಕೃತಿಯನ್ನು ಉಳಿಸಿಕೊಡುವುದು ನಮ್ಮ ಬಹಳ ಮುಖ್ಯ ಜವಾಬ್ದಾರಿಯಾಗಿದೆ ಎಂದು ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಕಮಲ ಕೆ. ಹೇಳಿದ್ದಾರೆ.

ಕರ್ನಾಟಕ ರಾಜ್ಯ ಉಪ ವಲಯ ಅರಣ್ಯ ಅಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗ ದೊಂದಿಗೆ ಅರಣ್ಯ ಹುತಾತ್ಮರ ಸ್ಮರಣಾರ್ಥ ರಕ್ತನಿಧಿ ಕೇಂದ್ರದಲ್ಲಿ ಬುಧವಾರ ಆಯೋಜಿಸಲಾದ 19ನೆ ವರ್ಷದ ಬೃಹತ್ ರಕ್ತದಾನ ಶಿಬಿದಲ್ಲಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯಲ್ಲಿ ಪರಿಸರ ಬಗ್ಗೆ ಬಹಳ ಕಾಳಜಿ ಹೊಂದಿರುವ ಜನ ಇರುವುದರಿಂದ ಪ್ರತಿದಿನ ಕಚೇರಿಗೆ ಮರ ಕಡಿಯುವುದರ ವಿರುದ್ಧ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ದೂರು ಅರ್ಜಿಗಳು ಬರುತ್ತಿವೆ. ಪರಿಸರದ ಬಗ್ಗೆ ಕೇವಲ ಮಾತಿನಲ್ಲಿ ಪ್ರೀತಿ ತೋರಿಸಿದರೆ ಸಾಲದು. ನಮ್ಮ ಕೈಯಲ್ಲಿ ಆಗುವಷ್ಟು ಅದರ ಉಳಿವಿಗೆ ಕೆಲಸ ಮಾಡಬೇಕು. ಮಕ್ಕಳಿಗೆ ಮನೆಯಿಂದಲೇ ಪ್ರಕೃತಿ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದರು.

ನಮ್ಮ ಹಿರಿಯರು ಬೆಳೆಸಿದ ಮರಗಳನ್ನು ನಾವು ನಮ್ಮ ಮಕ್ಕಳಿಗಾಗಿ ಉಳಿಸ ಬೇಕು. ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಮಾತ್ರ ಪ್ರಕೃತಿಯನ್ನು ಉಳಿಸಲು ಸಾಧ್ಯವಿಲ್ಲ. ಇದರಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಗಿಡಗಳನ್ನು ನೆಡುವುದು ಮಾತ್ರ ಮುಖ್ಯವಲ್ಲ. ಅದನ್ನು ಪೋಷಣೆ ಮಾಡಿ ಬೆಳೆಸುವುದೇ ಇಂದಿನ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಕಾಡು ನಾಶ ಆಗಲು ಬಿಡಲೇ ಬಾರದು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪವರ್ ಕಾರ್ಪೊರೇಶನ್‌ನ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಇಂದು ಎಲ್ಲ ಕಡೆಗಳಲ್ಲಿ ಅರಣ್ಯ ಕಡಿಮೆ ಆಗುತ್ತಿದೆ. ಪೊಲೀಸರಂತೆ ಅರಣ್ಯ ಇಲಾಖೆಯವರ ತ್ಯಾಗ ಕೂಡ ಬಹಳ ಮುಖ್ಯವಾದುದು. ಪ್ರಕೃತಿ ಎಂಬ ದೇವರು ನಮ್ಮ ಜೊತೆ ಇದ್ದರೆ ಯಾವುದೇ ಸಮಸ್ಯೆ ನಮಗೆ ಎದುರಾಗಲ್ಲ. ಅಭಿವೃದ್ಧಿ ಜೊತೆ ಅರಣ್ಯ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಕೆ., ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಶೇಖರ್ ಅಡಿಗ, ಡಾ. ಶಶಿಕಲಾ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿ ಗಾರ್, ಕುಂದಾಪುರ ವಿಭಾಗ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಜಿ.ನಾಯ್ಕ ಉಪಸ್ಥಿತರಿದ್ದರು.

ಸಂಘದ ಗೌರವಾಧ್ಯಕ್ಷ ಮಡೂರ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಪಾಧ್ಯಕ್ಷ ನಾಗೇಶ್ ಬಿಲ್ಲವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News