‘ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರ ಪ್ರೋತ್ಸಾಹ ಅತೀ ಅಗತ್ಯ’

Update: 2019-09-11 12:59 GMT

ಉದ್ಯಾವರ, ಸೆ.11:ಮಕ್ಕಳ ಕಲಿಕಾ ಪ್ರತಿಭೆ ಅಥವಾ ಇನ್ನಿತರ ಪ್ರತಿಭೆಗಳು ಅನಾವರಣಗೊಳ್ಳಲು ಶಿಕ್ಷಕರ ಪ್ರೋತ್ಸಾಹ ಅತೀ ಅಗತ್ಯವಾಗಿದೆ. ಹೊರ ಜಗತ್ತಿಗೆ ಅದು ಗೊತ್ತಾಗುವಂತೆ ಮಾಡುವುದು ಶಾಲೆಯ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಕಲರ್ಸ್‌ ಸೂಪರ್ ಸಂಗೀತ ರಿಯಾಲಿಟಿ ಶೋ ಕನ್ನಡ ಕೋಗಿಲೆ ಸೀಸನ್ ಒಂದರ ಫೈನಲಿಸ್ಟ್ ಗಣೇಶ್ ಕಾರಂತ್ ಹೇಳಿದ್ದಾರೆ.

ಸೇವಾ ನಿವೃತ್ತಿ ಹೊಂದಿದ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಗೀತಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿ ಅವರು ಮಾತನಾಡುತಿದ್ದರು.

ಮತ್ತೋರ್ವ ಮುಖ್ಯ ಅತಿಥಿ ಉಡುಪಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಉಮಾ ಮಾತನಾಡಿ, ಓರ್ವ ಶಿಕ್ಷಕಿ ಮಕ್ಕಳಿಂದ ಹೊಗಳಿಸಿ ಕೊಳ್ಳುವುದು ಸುಲಭದ ಕೆಲಸವಲ್ಲ. ಆಕೆ ಕೇವಲ ಪಾಠ ಪ್ರವಚನಗಳನ್ನು ಉತ್ತಮವಾಗಿ ಮಾಡಿದರೆ ಸಾಲದು. ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸಬೇಕು. ಆಗ ಮಾತ್ರ ಮಕ್ಕಳು ಅಂತಹ ಶಿಕ್ಷಕರನ್ನು ನೆನಪಿಟ್ಟುಕೊಳ್ಳುತ್ತಾರೆ. ಗೀತಾ ಟೀಚರ್ ಅಂತಹ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಗೀತಾ, ನನ್ನ ಶ್ರಮಕ್ಕಿಂತ ಹೆಚ್ಚಿನದ್ದನ್ನು ಶಿಕ್ಷಕ ವೃತ್ತಿ ನನಗೆ ಕೊಟ್ಟಿದೆ. ಶಿಕ್ಷಕ ವೃತ್ತಿಯಲ್ಲಿ ನನಗೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞಳು ಎಂದರು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಡಾ.ಯು.ಎನ್.ಮಯ್ಯ ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್, ಶಾಲಾ ನಾಯಕ ಮನ್ವಿತ್ ತಿಂಗಳಾಯ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕಿ ಗೀತಾ ಅವರಿಗೆ ಚಿನ್ನದ ಉಂಗುರ, ಸ್ಮರಣಿಕೆ, ಸೀರೆ ನೀಡಿ ಗೌರವಿಸಲಾಯಿತು. ಮುಖ್ಯ ಶಿಕ್ಷಕ ಗಣಪತಿ ಕಾರಂತ್ ಸ್ವಾಗತಿಸಿದರು. ಶಾಲಾ ಸಂಚಾಲಕ ಉದ್ಯಾವರ ನಾಗೇಶ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಹ ಶಿಕ್ಷಕಿ ಹೇಮಲತಾ ವಂದಿಸಿ ಸಹ ಶಿಕ್ಷಕಿ ರತ್ನಾವತಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News