ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ

Update: 2019-09-11 16:25 GMT

ಕೋಲ್ಕತಾ, ಸೆ.11: ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಸಲಾನ್‌ಪುರದಲ್ಲಿ ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು ಗಂಭೀರ ಗಾಯಗೊಂಡ ಆತ ಬಳಿಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವ್ಯಕ್ತಿಯೊಬ್ಬನ ಮೇಲೆ ಗುಂಪು ದಾಳಿ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ವ್ಯಕ್ತಿಯನ್ನು ರಕ್ಷಿಸಲು ಮುಂದಾದಾಗ ಅಲ್ಲಿದ್ದ ಸ್ಥಳೀಯರು ಪೊಲೀಸರ ಮೇಲೆಯೇ ಆಕ್ರಮಣ ನಡೆಸಿದ್ದಾರೆ. ಸ್ಥಳೀಯರನ್ನು ಚದುರಿಸಿ, ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಅಸಾನ್ಸೋಲ್‌ನ ಉಪ ಪೊಲೀಸ್ ಆಯುಕ್ತ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗುಪ್ತಾ ಹೇಳಿದ್ದಾರೆ. ಆಗಸ್ಟ್ 30ರಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗುಂಪು ಹಲ್ಲೆ, ಹತ್ಯೆ ವಿರೋಧಿ ಮಸೂದೆ ಅಂಗೀಕಾರಗೊಂಡ ಬಳಿಕ ರಾಜ್ಯದಲ್ಲಿ ನಡೆದಿರುವ ಎರಡನೇ ಗುಂಪು ಹತ್ಯೆ ಪ್ರಕರಣ ಇದಾಗಿದೆ.

ಸೆಪ್ಟೆಂಬರ್ 4ರಂದು ಅಪರಿಚಿತ ವ್ಯಕ್ತಿಗಳು ಕ್ಲಿನಿಕ್ ಒಂದರಲ್ಲಿ ಕಬೀರ್ ಶೇಖ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಆತ ಮೃತಪಟ್ಟಿದ್ದ. ಇನ್ನೆರಡು ಪ್ರಕರಣಗಳಲ್ಲಿ ಹಲ್ಲೆಗೊಳಗಾದವರನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿತ್ತು. ಬಳಿಕ ಪೊಲೀಸರು ಆತನನ್ನು ರಕ್ಷಿಸಿದ್ದರು. ಸೆಪ್ಟೆಂಬರ್ 3ರಂದು ಜಲಪಾಗುರಿ ಜಿಲ್ಲೆಯ ಬನಿಯಾಪರ ಗ್ರಾಮದಲ್ಲಿ ಧರ್ಮ ಸಿಂಗ್ ಎಂಬಾತನ ಮೇಲೆ ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ಹಲ್ಲೆ ನಡೆಸಲಾಗಿತ್ತು. ಆತನ ರಕ್ಷಣೆಗೆ ಬಂದ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ ಗುಂಪು, ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News