ಮೊದಲ ಅನಧಿಕೃತ ಟೆಸ್ಟ್ ಪಂದ್ಯ: ದ.ಆಫ್ರಿಕಕ್ಕೆ ಅಲ್ಪ ಮುನ್ನಡೆ

Update: 2019-09-11 17:52 GMT

ತಿರುವನಂತಪುರ, ಸೆ.11: ಎಡಗೈ ಸ್ಪಿನ್ನರ್ ಶಹಬಾಝ್ ನದೀಂ ಸ್ಪಿನ್ ಜಾದೂವಿಗೆ ತತ್ತರಿಸಿದ ದಕ್ಷಿಣ ಆಫ್ರಿಕ ಎ ತಂಡ ಭಾರತ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ.

ಮಳೆಬಾಧಿತ ಮೂರನೇ ದಿನದಾಟವಾದ ಬುಧವಾರ 5 ವಿಕೆಟ್‌ಗಳ ನಷ್ಟಕ್ಕೆ 125 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕ ದಿನದಾಟದಂತ್ಯಕ್ಕೆ 55 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 179 ರನ್ ಗಳಿಸಿದೆ. ಕೇವಲ 40 ರನ್ ಮುನ್ನಡೆಯಲ್ಲಿದೆ. ಬಾಲಂಗೋಚಿಗಳಾದ ಲುಂಗಿ ಗಿಡಿ ಹಾಗೂ ಸಿಪಾಮ್ಲಾ(ಔಟಾಗದೆ 5) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಶುಭಮನ್ ಗಿಲ್ ನೇತೃತ್ವದ ಭಾರತ ನಾಲ್ಕನೇ ಹಾಗೂ ಕೊನೆಯ ದಿನವಾದ ಗುರುವಾರ ಹರಿಣ ಪಡೆಯನ್ನು ಆದಷ್ಟು ಬೇಗನೆ ಕಟ್ಟಿಹಾಕಿ ಗೆಲ್ಲಲು ಸುಲಭ ಗುರಿ ಪಡೆಯುವ ಯೋಚನೆಯಲ್ಲಿದೆ. 35 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ಲಾಸೆನ್ ಹಾಗೂ 12 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮುಲ್ಡರ್ ಆರನೇ ವಿಕೆಟ್‌ಗೆ 74 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕ್ಲಾಸೆನ್(48, 104 ಎಸೆತ)ಕೇವಲ 2 ರನ್‌ನಿಂದ ಅರ್ಧಶತಕ ವಂಚಿತರಾದರೆ, ಮುಲ್ಡರ್(46, 62 ಎಸೆತ)50ರನ್ ಗಳಿಸಲು 4 ರನ್ ಕೊರತೆ ಎದುರಿಸಿದರು. ಭಾರತದ ಬೌಲಿಂಗ್ ವಿಭಾಗದಲ್ಲಿ ನದೀಂ(3-17) ಯಶಸ್ವಿ ಬೌಲರ್ ಎನಿಸಿಕೊಂಡರು. ಆಲ್‌ರೌಂಡರ್ ಜಲಜ್ ಸಕ್ಸೇನ(2-22)ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್(1-28), ಮುಹಮ್ಮದ್ ಸಿರಾಜ್(1-36)ಹಾಗೂ ಕೆ.ಗೌತಮ್(1-52)ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

► ದಕ್ಷಿಣ ಆಫ್ರಿಕ ಎ ಮೊದಲ ಇನಿಂಗ್ಸ್: 164

► ದಕ್ಷಿಣ ಆಫ್ರಿಕ ಎ ಎರಡನೇ ಇನಿಂಗ್ಸ್: 55 ಓವರ್‌ಗಳಲ್ಲಿ 179/9 (ಕ್ಲಾಸನ್ 48, ಮುಲ್ಡರ್ 46, ಹಂಝಾ 44, ನದೀಂ 3-17, ಜಲಜ್ ಸಕ್ಸೇನ 2-22)

► ಭಾರತ ಎ ಮೊದಲ ಇನಿಂಗ್ಸ್: 303

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News