ಸ್ಥಾಪಿತ ಹಿತಾಸಕ್ತಿಗಳು ತಿರುಚಿದ ಫಲಿತಾಂಶ

Update: 2019-09-11 17:59 GMT

ಮಾನ್ಯರೇ,

ಎರಡು ವರ್ಷಗಳ ಹಿಂದೆ ಹರ್ಯಾಣದ ರಾಖಿಗರಿ ಎಂಬ ಗ್ರಾಮದಲ್ಲಿ ದೊರೆತ ಮೂರು ಮಾನವ ಅಸ್ಥಿಪಂಜರಗಳು ಸುಮಾರು 4,500 ವರ್ಷ ಹಳೆಯದಾಗಿದ್ದು ಅವು ಸಿಂಧೂಘಾಟಿ ನಾಗರಿಕತೆ ಅರ್ಥಾತ್ ಹರಪ್ಪಾಸಂಸ್ಕೃತಿಯ ಕಾಲಘಟ್ಟದವು ಎಂದು ಎಲುಬಿನ ಡಿಎನ್‌ಎ ಪರೀಕ್ಷೆಯಿಂದ ಸಾಬೀತಾಗಿದೆ. ಅದರ ವಂಶವಾಹಿ ಪರೀಕ್ಷಿಸಿದಾಗ ಅದು ತಮಿಳುನಾಡಿನ ಆದಿವಾಸಿ ದ್ರಾವಿಡ ಜನಾಂಗಕ್ಕೆ ಅಕ್ಷರಶ ಹೋಲಿಕೆಯಾಗುತ್ತದೆ ಹಾಗೂ ಈಗಿನ ಹರ್ಯಾಣದ ಅಥವಾ ಉತ್ತರ ಭಾರತೀಯರ ವಂಶವಾಹಿಗೆ ಅದು ಸ್ವಲ್ಪವೂ ಹೋಲಿಕೆ ಆಗುತ್ತಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಂತು ಎಂದು ಇದೇ ಇತ್ತೀಚೆಗೆ ಪ್ರಕಟವಾದ ಎರಡು ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಲ್ಲಿ ಬರೆಯಲಾಗಿದೆ. 4,500 ವರ್ಷಗಳ ಹಿಂದೆ ಇದ್ದ ಎಲ್ಲಿಯ ಹರ್ಯಾಣದ ಕುಗ್ರಾಮ? ಎಲ್ಲಿಯ ತಮಿಳುನಾಡಿನ ಗುಡ್ಡಗಾಡು ಜನಾಂಗ!? ಅಷ್ಟೇ ಅಲ್ಲ ಸಿಂಧೂಘಾಟಿ-ಹರಪ್ಪಾನಾಗರಿಕತೆಗೂ ಯುರೇಷಿಯಾದ ಸ್ಟೆಪ್ಪೀ ಪ್ರದೇಶದಿಂದ ಭಾರತಕ್ಕೆ ವಲಸೆ ಬಂದ ಆರ್ಯರಿಗೂ ಸ್ವಲ್ಪವೂ ಸಂಬಂಧವಿಲ್ಲ ಹಾಗೂ ಮೊಹೆಂಜದಾರೋ- ಹರಪ್ಪಾದವರು ದ್ರಾವಿಡರಾಗಿದ್ದರು ಎಂದು ಈಗಿನ ರಾಖಿಗರಿ ಡಿಎನ್‌ಎ ಪರೀಕ್ಷೆಯಿಂದ ಕಂಡು ಬಂದಿದೆ ಎಂದು ಪುಣೆಯ ಡೆಕ್ಕನ್ ಕಾಲೇಜಿನ ಸಂಶೋಧಕರು ಸ್ಪಷ್ಟ ಪಡಿಸಿದ್ದಾರೆ.

ಆದರೂ ಕೆಲವು ಪತ್ರಿಕೆಗಳು ಮೊನ್ನೆಯ ಸಂಚಿಕೆಯಲ್ಲಿ ರಾಖಿಗರಿ ಡಿಎನ್‌ಎ ಪರಿಕ್ಷೆಯಲ್ಲಿ ಬಂದ ಫಲಿತಾಂಶವನ್ನು ಸಂಪೂರ್ಣವಾಗಿ ತಿರುಚಿ ಸಿಂಧೂಘಾಟಿ- ಹರಪ್ಪಾಸಂಸ್ಕೃತಿಯು ವೈದಿಕ ಸಂಸ್ಕೃತಿಯೇ ಆಗಿತ್ತು ಹಾಗೂ ಆರ್ಯರು ಹೊರಗಿನಿಂದ ವಲಸೆ ಬಂದವರು ಎಂಬ ಸಿದ್ಧಾಂತ ಪೂರ್ಣ ಸುಳ್ಳು ಎಂಬುದು ರಾಖಿಗರಿಯಲ್ಲಿ ಸಾಬೀತಾಯಿತು ಎಂದು ತಿರುಚಿ ಬರೆದು ತಮ್ಮ ವಿಕೃತ ಬುದ್ಧಿ ತೋರಿಸಿರುವುದು ಖೇದಕರ. ಅಡಿಗಡಿಗೆ ತಮ್ಮ ವಿರೋಧಿಗಳಿಗೆ- ‘‘ನೀನು ದೇಶದ್ರೋಹಿ ಪಾಕಿಸ್ತಾನಕ್ಕೆ ಹೋಗು’’ ಎಂದು ಅರಚಲು ಅನುಕೂಲವಾಗಲೆಂದೇ ಈ ತಿರುಚಾಟ ನಡೆದಿದೆ ಎಂಬುದು ಸ್ಪಷ್ಟ. ಹಿಂದಿನ ಒಂದು ದಶಕದಿಂದ ಭಾರತದ ಜನರ ವಂಶವಾಹಿಯ ಇತಿಹಾಸ ತಿರುಚಿ ಆರ್ಯರು 3,500 ವರ್ಷಗಳ ಹಿಂದೆ ಹೊರದೇಶದಿಂದ ಬಂದವರಲ್ಲ, ಅವರು ಸಾವಿರಾರು ವರ್ಷಗಳಿಂದ ಭಾರತದಲ್ಲಿದ್ದ ಮೂಲನಿವಾಸಿಗಳೇ ಆಗಿದ್ದರು ಎಂದು ಸಾಬೀತು ಮಾಡಲು ಕೆಲವು ಮೇಲ್ಜಾತಿಯ ಸ್ಥಾಪಿತ ಹಿತಾಸಕ್ತಿಗಳು ಹರಸಾಹಸ ಮಾಡುತ್ತಿರುವುದು ನಿಜ. ಅದರ ಪರಿಣಾಮವೇ ಈಗಿನ ರಾಖಿಗರಿ ಡಿಎನ್‌ಎ ಪರೀಕ್ಷೆಯ ಫಲಿತಾಂಶದ ಭಾರೀ ತಿರುಚಾಟ!

Writer - -ಅನಿಲ್ ಪೂಜಾರಿ, ಬೆಂಗಳೂರು

contributor

Editor - -ಅನಿಲ್ ಪೂಜಾರಿ, ಬೆಂಗಳೂರು

contributor

Similar News