ಅಂತಿಮ ಆ್ಯಶಸ್ ಟೆಸ್ಟ್: ರಾಯ್ ಕೈಬಿಟ್ಟ ಇಂಗ್ಲೆಂಡ್

Update: 2019-09-12 04:36 GMT

ಲಂಡನ್, ಸೆ.11: ಸರಣಿ ಸಮಬಲಗೊಳಿಸುವತ್ತ ಚಿತ್ತವಿರಿಸಿರುವ ಇಂಗ್ಲೆಂಡ್ ತಂಡ ದಿ ಓವಲ್‌ನಲ್ಲಿ ಗುರುವಾರ ಆರಂಭವಾಗಲಿರುವ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಿರುವ ತಂಡದಿಂದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅವರನ್ನು ಕೈಬಿಟ್ಟಿದೆ.

ಓಲ್ಡ್ ಟ್ರಾಫೋರ್ಡ್‌ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋತಿದ್ದ ತಂಡದಲ್ಲಿದ್ದ ರಾಯ್ ಹಾಗೂ ಬೌಲರ್ ಕ್ರೆಗ್ ಓವರ್ಟನ್‌ರನ್ನು ಕೈಬಿಡಲಾಗಿದೆ. ಈ ಇಬ್ಬರ ಬದಲಿಗೆ ಆಲ್‌ರೌಂಡರ್ ಸ್ಯಾಮ್ ಕರನ್ ಹಾಗೂ ಕ್ರಿಸ್ ವೋಕ್ಸ್ ಆಯ್ಕೆಯಾಗಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭುಜನೋವಿಗೆ ತುತ್ತಾಗಿದ್ದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ 5ನೇ ಪಂದ್ಯದಲ್ಲಿ ಬೌಲಿಂಗ್ ಮಾಡದೆ, ಬ್ಯಾಟಿಂಗ್‌ಗೆ ಸೀಮಿತಗೊಳ್ಳಲಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ನಾಲ್ಕನೇ ಪಂದ್ಯವನ್ನು ಜಯಿಸಿದ್ದ ಆಸ್ಟ್ರೇಲಿಯ 2-1 ಮುನ್ನಡೆಯೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದೆ. ಆಸೀಸ್ 5ನೇ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿದೆ. ಟ್ರೆವಿಡ್ ಹೆಡ್ ಬದಲಿಗೆ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಆಯ್ಕೆಯಾಗಿದ್ದಾರೆ.

 ರಾಯ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅಚ್ಚರಿಯ ಹೆಜ್ಜೆ ಯಲ್ಲ. ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸರಣಿಯುದ್ದಕ್ಕೂ ರನ್ ಗಳಿಸಲು ಪರದಾಟ ನಡೆಸಿದ್ದರು. ರಾಯ್ 8 ಇನಿಂಗ್ಸ್‌ಗಳಲ್ಲಿ ಒಟ್ಟು 110 ರನ್ ಗಳಿಸಿದ್ದು, ಓಲ್ಡ್ ಟ್ರಾಫೋರ್ಡ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(31)ಗಳಿಸಿದ್ದರು.

ಇಂಗ್ಲೆಂಡ್ ಟೆಸ್ಟ್ ತಂಡ:

ಜೋ ರೂಟ್(ನಾಯಕ), ಜೊಫ್ರಾ ಆರ್ಚರ್, ಜಾನಿ ಬೈರ್‌ಸ್ಟೊವ್(ವಿಕೆಟ್‌ಕೀಪರ್), ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಜೋ ಡೆನ್ಲಿ, ಜಾಕ್ ಲೀಚ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News