‘ಗಿರಿಗಿಟ್’ತುಳು ಚಲನಚಿತ್ರದಲ್ಲಿ ನ್ಯಾಯಾಂಗ ನಿಂದನೆ, ವಕೀಲರ ಅವಹೇಳನ: ಆರೋಪ

Update: 2019-09-12 12:21 GMT

ಮಂಗಳೂರು,ಸೆ.12:ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ತುಳು ಚಲನಚಿತ್ರ ‘ಗಿರಿಗಿಟ್’ ಚಿತ್ರ ಪ್ರದರ್ಶನಕ್ಕೆ ಮಂಗಳೂರು ಕಿರಿಯ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಈ ಚಿತ್ರದಲ್ಲಿ ವಕೀಲರ ಸಮುದಾಯವನ್ನು ಅವಹೇಳನ ಮಾಡಲಾಗಿದೆ. ಅಲ್ಲದೆ, ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲರ ಬಗ್ಗೆ ಕೀಳು ಅಭಿರುಚಿಯಲ್ಲಿ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಚಿತ್ರದ ವಿರುದ್ಧ ಮಂಗಳೂರು ವಕೀಲರ ಸಂಘವು ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ತಡೆಯಾಜ್ಞೆ ಕೋರಿ ದಾವೆ ಹೂಡಿತ್ತು. ಸಂಘದ ಪರ ಹಿರಿಯ ವಕೀಲ ಎಂ.ಪಿ. ಶೆಣೈ ವಾದ ಮಂಡಿಸಿದ್ದರು. ವಾದವನ್ನು ಆಲಿಸಿದ ಮಂಗಳೂರು ಕಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ ಅವರು ತಡೆಯಾಜ್ಞೆ ನೀಡಿ ಆದೇಶ ನೀಡಿದ್ದಾರೆ.

ಈ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಇಂತಹ ಮಾನಹಾನಿಕರ ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ಮಂಗಳೂರು ವಕೀಲರ ಸಂಘವು ತೀವ್ರ ಹೋರಾಟ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಂ.ಪಿ. ಶೆಣೈ, ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಉಪಾಧ್ಯಕ್ಷ ಜಿನೇಂದ್ರ ಕುಮಾರ್, ಜೊತೆ ಕಾರ್ಯದರ್ಶಿ ಶರ್ಮಿಳಾ, ಕೋಶಾಧಿಕಾರಿ ಅರುಣಾ ಬಿ.ಪಿ. ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News