ನಾಗಾ ಸಮುದಾಯ ಭಾರತದೊಂದಿಗೆ ವಿಲೀನಗೊಳ್ಳುವುದಿಲ್ಲ,ಎನ್‌ಎಸ್‌ಸಿಎನ್(ಐಎಂ)

Update: 2019-09-12 14:09 GMT

 ಹೊಸದಿಲ್ಲಿ,ಸೆ.12: ನಾಗಾ ಸಮುದಾಯವು ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳುವುದಿಲ್ಲ,ಆದರೆ ಎರಡು ಘಟಕಗಳ ರೂಪದಲ್ಲಿ ಭಾರತದೊಂದಿಗೆ ಸಹಅಸ್ತಿತ್ವದಲ್ಲಿರುತ್ತದೆ ಎಂದು ಬಂಡುಕೋರ ಸಂಘಟನೆ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಇಸಾಕ್-ಮುಇವಾ) ಹೇಳಿದೆ.

ಭಾರತ-ನಾಗಾ ರಾಜಕೀಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅವಕಾಶವನ್ನು ಬಳಸಿಕೊಳ್ಳುವಂತೆ ನಾಗಾಗಳಿಗೆ ಕರೆ ನೀಡಿರುವ ಅದು, ಇಂತಹ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿರುವ ಪ್ರತಿಯೊಂದೂ ಮಾರ್ಗವನ್ನು ಅನ್ವೇಷಿಸಬೇಕು ಎಂದು ಹೇಳಿದೆ.

ನಾಗಾ ಸಮುದಾಯವು ಮಾನ್ಯತೆ ಪಡೆದಿರುವ ಘಟಕವಾಗಿದೆ. ನಾಗಾಗಳು ಭಾರತೀಯ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ,ಆದರೆ ಸಾಮರ್ಥ್ಯದ ಆಧಾರದಲ್ಲಿ ಭಾರತೀಯರೊಂದಿಗೆ ಸಾರ್ವಭೌಮ ಅಧಿಕಾರವನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ.

1997ರಲ್ಲಿ ಭಾರತ ಸರಕಾರವು ಎನ್‌ಎಸ್‌ಸಿಎನ್(ಐಎಂ) ಜೊತೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತ್ತು. 2015ರಲ್ಲಿ ಕೇಂದ್ರ ಸರಕಾರ ಮತ್ತು ಎನ್‌ಎಸ್‌ಸಿಎನ್(ಐಎಂ) ಪರಿಹಾರವೊಂದನ್ನು ಕಂಡುಕೊಳ್ಳಲು ಮಾತುಕತೆಗಳನ್ನು ಆರಂಭಿಸಿದ್ದವು. ಆದರೂ 2018,ಜೂನ್‌ನಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಭಾರತೀಯ ಸೇನೆಯ ಜಂಟಿ ತಂಡವೊಂದು ಅರುಣಾಚಲ ಪ್ರದೇಶದ ಮೊಟೊಂಗ್ಸಾ ಗ್ರಾಮದಲ್ಲಿ ಮೂರು ಎನ್‌ಎಸ್‌ಸಿಎನ್(ಐಎಂ) ಶಿಬಿರಗಳನ್ನು ಧ್ವಂಸಗೊಳಿಸಿತ್ತು.

ವಿಶೇಷ ಸ್ಥಾನಮಾನದೊಂದಿಗೆ ಭಾರತ ಒಕ್ಕೂಟದಲ್ಲಿ ಇರಲು ಎನ್‌ಎಸ್‌ಸಿಎನ್(ಐಎಂ) ಒಪ್ಪಿಕೊಂಡ ಬಳಿಕ ಅದರೊಂದಿಗೆ ಮಾರ್ಗಸೂಚಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕೇಂದ್ರವು ಕಳೆದ ವರ್ಷದ ಜುಲೈನಲ್ಲಿ ಸಂಸದೀಯ ಸಮಿತಿಯೊಂದಕ್ಕೆ ತಿಳಿಸಿತ್ತು. ‘ ಭಾರತದೊಂದಿಗೆ ಇರುತ್ತೇವೆ,ಆದರೆ ಭಾರತದೊಳಗೆ ಇರುವುದಿಲ್ಲ’ ಎಂಬ ತನ್ನ ಹಿಂದಿನ ನಿಲುವಿನಿಂದ ಎನ್‌ಎಸ್‌ಸಿಎನ್(ಐಎಂ) ವಿಮುಖಗೊಂಡ ಬಳಿಕ ಅದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ನಾಗಾ ಮಾತುಕತೆಗಳಿಗಾಗಿ ಆಗ ಸಂಧಾನಕಾರರಾಗಿದ್ದ ಆರ್.ಎನ್.ರವಿ ಹೇಳಿದ್ದರು.

ನಾಗಾ ಪ್ರದೇಶಗಳಲ್ಲಿಯ ಎಲ್ಲ ನಾಗಾಗಳ ಸಮಸ್ಯೆಗಳನ್ನು ತಾನು ಪ್ರತಿನಿಧಿಸುತ್ತಿರುವುದರಿಂದ ಭಾರತ ಸರಕಾರವು ತನ್ನೊಂದಿಗೆ ಶಾಂತಿ ಮಾತುಕತೆಗಳನ್ನು ನಡೆಸುತ್ತಿದೆ ಎಂದೂ ಎನ್‌ಎಸ್‌ಸಿಎನ್(ಐಎಂ) ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News