ಕಾಶ್ಮೀರದ ಸಂಪರ್ಕ ತಡೆ ತೆರವಿಗೆ ಅಮೆರಿಕ ಸಂಸದರ ಆಗ್ರಹ

Update: 2019-09-12 14:41 GMT

ವಾಶಿಂಗ್ಟನ್, ಸೆ. 12: ಕಾಶ್ಮೀರದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಅಮೆರಿಕದ ಇಬ್ಬರು ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ತಕ್ಷಣ ಸಂಪರ್ಕ ತಡೆಯನ್ನು ತೆರವುಗೊಳಿಸುವಂತೆ ಹಾಗೂ ಬಂಧಿತರನ್ನು ಬಿಡುಗಡೆ ಮಾಡುವಂತೆ ಭಾರತಕ್ಕೆ ಮನವರಿಕೆ ಮಾಡುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊರನ್ನು ಒತ್ತಾಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಮತ್ತು ಸ್ವತಂತ್ರ ಮಾನವಹಕ್ಕು ವೀಕ್ಷಕರಿಗೆ ತಕ್ಷಣ ಅನುಮತಿ ನೀಡಬೇಕು ಎಂದು ಸೆಪ್ಟಂಬರ್ 11ರಂದು ಪಾಂಪಿಯೊಗೆ ಬರೆದ ಪತ್ರದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಮೊದಲ ಹಾಗೂ ಏಕೈಕ ಭಾರತೀಯ-ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಮತ್ತು ಸಂಸದ ಜೇಮ್ಸ್ ಪಿ. ಮೆಕ್‌ಗೋವರ್ನ್ ಹೇಳಿದ್ದಾರೆ.

‘‘ಕಾಶ್ಮೀರದಲ್ಲಿ ವಿಧಿಸಲಾಗಿರುವ ಸಂಪರ್ಕ ಸ್ಥಾಗಿತ್ಯವನ್ನು ತಕ್ಷಣ ಕೊನೆಗೊಳಿಸುವಂತೆ, ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿರುವ ವ್ಯಕ್ತಿಗಳ ಬಂಧನವನ್ನು ಪರಿಶೀಲಿಸುವ ಮತ್ತು ಅವರನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ, ಆಸ್ಪತ್ರೆಗಳಿಗೆ ಜೀವರಕ್ಷಕ ಔಷಧಗಳ ಪೂರೈಕೆ ಇರುವಂತೆ ನೋಡಿಕೊಳ್ಳುವಂತೆ ಮತ್ತು ಒಟ್ಟು ಸೇರುವ ಮತ್ತು ಪೂಜಿಸುವ ಕಾಶ್ಮೀರಿಗಳ ಸ್ವಾತಂತ್ರವನ್ನು ರಕ್ಷಿಸುವಂತೆ ಭಾರತ ಸರಕಾರದ ಮೇಲೆ ಅಮೆರಿಕ ಆಡಳಿತ ಒತ್ತಡ ಹೇರಬೇಕೆಂದು ನಾವು ಒತ್ತಾಯಿಸುತ್ತೇವೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.

ಕಾಶ್ಮೀರದಲ್ಲಿನ ‘ಬಿಕ್ಕಟ್ಟಿ’ನ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ ಎಂದು ಇಬ್ಬರು ಸಂಸದರು ಪಾಂಪಿಯೊಗೆ ಹೇಳಿದ್ದಾರೆ.

‘‘ಮುಖ್ಯವಾಗಿ, ಭಾರತ ಸರಕಾರವು ಸಾವಿರಾರು ಜನರನ್ನು ಬಂಧಿಸಿದೆ ಎಂಬ ಪತ್ರಕರ್ತರು ಮತ್ತು ವಕೀಲರ ವಿಶ್ವಾಸಾರ್ಹ ವರದಿಗಳಿಂದ ನಾವು ಹೆಚ್ಚು ಚಿಂತಿತರಾಗಿದ್ದೇವೆ’’ ಎಂದು ಸಂಸದರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News