ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿದವರಿಗೆ 7 ಫುಟ್ಬಾಲ್ ಅಂಗಣಗಳಷ್ಟು ದೊಡ್ಡ ಸ್ಥಳದಲ್ಲಿ ದಿಗ್ಬಂಧನ ಕೇಂದ್ರ

Update: 2019-09-12 14:51 GMT

ಗುವಾಹಟಿ, ಸೆ.12: ಅಸ್ಸಾಂನ ವಿವಾದಿತ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಪಟ್ಟಿಯಿಂದ ಕೈಬಿಟ್ಟು ವಿದೇಶೀಯರೆಂದು ಘೋಷಿತರಾದವರಿಗೆ ಭಾರತದ ಪ್ರಥಮ ದಿಗ್ಬಂಧನ ಕೇಂದ್ರ ಗುವಾಹಟಿಗಿಂತ ಸುಮಾರು 150 ಕಿಮೀ ದೂರದಲ್ಲಿ  ತಲೆಯೆತ್ತುತ್ತಿದೆ. ಕಳೆದ ತಿಂಗಳು ಪ್ರಕಟಗೊಂಡ ಅಂತಿಮ ಪಟ್ಟಿಯಿಂದ 19 ಲಕ್ಷ ಮಂದಿಯನ್ನು ಹೊರಗಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಗೋಲ್ಪರ ಜಿಲ್ಲೆಯ  ಮಟಿಯಾ ಎಂಬಲ್ಲಿ ನಿರ್ಮಿಸಲಾಗುತ್ತಿರುವ ಈ ಸಾಮೂಹಿಕ ದಿಗ್ಬಂಧನ ಕೇಂದ್ರದಲ್ಲಿ ಸುಮಾರು 3,000 ಜನರನ್ನು ಇರಿಸಬಹುದಾಗಿದ್ದು 2.5 ಹೆಕ್ಟೇರ್  ಪ್ರದೇಶದಲ್ಲಿ ಸುಮಾರು ಏಳು ಫುಟ್ಬಾಲ್ ಅಂಗಣಗಳಷ್ಟು ಸ್ಥಳಾವಕಾಶ ಇಲ್ಲಿದೆ. ಇಲ್ಲಿ ನಾಲ್ಕು ಮಹಡಿಗಳ ಒಟ್ಟು 15 ಕಟ್ಟಡವಿರಲಿದ್ದು, ಡಿಸೆಂಬರ್ ಅಂತ್ಯದೊಳಗಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಸರಕಾರ ಹೊಂದಿದೆ.

ಇಲ್ಲಿ ಒಂದು ಆಸ್ಪತ್ರೆ, ಸಭಾಂಗಣ, ಪ್ರಾಥಮಿಕ ಶಾಲೆ ಹಾಗೂ ಪಾಕ ಶಾಲೆಯಿರಲಿದ್ದು, 180 ಶೌಚಾಲಯ ಮತ್ತು ಸ್ನಾನದ ಕೊಠಡಿಗಳಿರಲಿವೆ. ದಿಗ್ಬಂಧನ ಶಿಬಿರದ ಸುತ್ತಲೂ ಕೆಂಪು ಬಣ್ಣ ಬಳಿಯಲಾಗಿರುವ ಕಂಪೌಂಡ್ ಗೋಡೆ ತಲೆಯೆತ್ತಿದ್ದು, ಈ ಹೊರಾಂಗಣ ಗೋಡೆ 20 ಅಡಿ ಎತ್ತರದಲ್ಲಿದ್ದರೆ ಒಳಗಿನ ಕಂಪೌಂಡ್ ಗೋಡೆ ಆರಡಿ ಎತ್ತರವಿದೆ. ಇಲ್ಲಿ ವೀಕ್ಷಣಾ ಗೋಪುರಗಳೂ ಇರಲಿವೆ.

ಇದು ಕಾರಾಗೃಹದಂತೆ ಕಾರ್ಯಾಚರಿಸದು ಎಂದು ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ಹಾಸ್ಟೆಲ್ ರೀತಿಯ ಕೊಠಡಿಗಳಿರಲಿದ್ದು, ಪ್ರತಿ ಕೊಠಡಿಯಲ್ಲಿ ನಾಲ್ಕರಿಂದ ಐದು ಮಂದಿ ವಾಸಿಸಲಿದ್ದು ಎಲ್ಲಾ ಕೊಠಡಿಗಳಿಗೂ ಬಾಗಿಲುಗಳು, ಉತ್ತಮ ಬೆಳಕಿನ ವ್ಯವಸ್ಥೆ ಹಾಗೂ ಕಿಟಿಕಿಗಳಿರಲಿವೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಿರುವ ಮಹಿಳೆಯರು ಹಾಗೂ ಹೊಸ ತಾಯಂದಿರಿಗೆ ಇಲ್ಲಿ ವಿಶೇಷ ವ್ಯವಸ್ಥೆಯಿರಲಿದೆ. ಸ್ಥಳೀಯ ಶಾಲೆಗಳಲ್ಲಿ ಇಲ್ಲಿನ ಮಕ್ಕಳಿಗೆ  ಶಿಕ್ಷಣವೊದಗಿಸಲಾಗುವುದು. ಈ ಕೇಂದ್ರವನ್ನು 46 ಕೋಟಿ  ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಅಸ್ಸಾಂ ಪೊಲೀಸ್ ಹೌಸಿಂಗ್ ಕಾರ್ಪೊರೇಶನ್ ಲಿಮಿಟೆಡ್ ನಿರ್ಮಾಣದ ಹೊಣೆ ಹೊತ್ತಿದೆ.

ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಮತ್ತೆ ಅಪೀಲು ಸಲ್ಲಿಸಲು 120 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅವರು ಕೊನೆಗೂ ತಮ್ಮ ಪೌರತ್ವ ಸಾಬೀತು ಪಡಿಸಲು ವಿಫಲವಾಗಿ ವಿದೇಶಿಯರೆಂದು ಘೋಷಿತರಾದಲ್ಲಿ ಮಾತ್ರ ಈ ಕೇಂದ್ರಕ್ಕೆ ಅವರನ್ನು ಮುಂದೆ ಸ್ಥಳಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News