ಉಗ್ರ ಸಂಘಟನೆಗೆ ಪಾಕಿಸ್ತಾನದಿಂದ ಕೋಟಿಗಟ್ಟಳೆ ರೂಪಾಯಿ ಖರ್ಚು: ಪಾಕ್ ಸಚಿವ

Update: 2019-09-12 14:55 GMT

ಇಸ್ಲಾಮಾಬಾದ್, ಸೆ. 12: ಭಯೋತ್ಪಾದಕ ಸಂಘಟನೆ ಜಮಾಅತುದಅವಾ (ಜೆಯುಡಿ)ಕ್ಕೆ ಪಾಕಿಸ್ತಾನವು ಕೋಟಿಗಟ್ಟಳೆ ರೂಪಾಯಿ ಖರ್ಚು ಮಾಡಿದೆ ಎಂದು ಆ ದೇಶದ ಆಂತರಿಕ ವ್ಯವಹಾರಗಳ ಸಚಿವ ಬ್ರಿಗೇಡಿಯರ್ ಇಜಾಝ್ ಅಹ್ಮದ್ ಶಾ ರಾಷ್ಟ್ರೀಯ ಟೆಲಿವಿಶನ್‌ನಲ್ಲಿ ಒಪ್ಪಿಕೊಂಡಿದ್ದಾರೆ.

ಜೆಯುಡಿಯು ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್‌ಗೆ ಸೇರಿದೆ.

ಭಯೋತ್ಪಾದಕ ಸಂಘಟನೆಯನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ಅದರ ಮೇಲೆ ಕೋಟಿಗಟ್ಟಳೆ ರೂಪಾಯಿ ಹಣವನ್ನು ಇಮ್ರಾನ್ ಖಾನ್ ಸರಕಾರ ಖರ್ಚು ಮಾಡಿದೆ ಎಂದು ಅವರು ಹೇಳಿದರು.

‘‘ನಾವು ಜೆಯುಡಿ ಮೇಲೆ ಕೋಟಿಗಟ್ಟಳೆ ರೂಪಾಯಿ ಹಣ ಖರ್ಚು ಮಾಡಿದ್ದೇವೆ. ನಿಷೇಧಿತ ಸಂಘಟನೆಯ ಸದಸ್ಯರನ್ನು ಮನವೊಲಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರಬೇಕಾಗಿದೆ’’ ಎಂದು ಪಾಕಿಸ್ತಾನದ ಖಾಸಗಿ ಸುದ್ದಿ ಚಾನೆಲ್ ‘ಹಮ್ ನ್ಯೂಸ್’ನಲ್ಲಿ ಪ್ರಸಾರವಾದ ಪತ್ರಕರ್ತ ನದೀಮ್ ಮಲಿಕ್‌ರ ಕಾರ್ಯಕ್ರಮದಲ್ಲಿ ಸಚಿವರು ಹೇಳಿದರು.

ಸಚಿವರ ಈ ಹೇಳಿಕೆಯು ಪ್ಯಾರಿಸ್‌ನಲ್ಲಿರುವ ಭಯೋತ್ಪಾದನೆ ಹಣಕಾಸು ನಿಗ್ರಹ ಸಂಸ್ಥೆ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಅಕ್ಟೋಬರ್‌ನಲ್ಲಿ ನಡೆಯಲಿರುವ ಸಭೆಗೆ ಪೂರ್ವಭಾವಿಯಾಗಿ ಮುಖ ಉಳಿಸಿಕೊಳ್ಳುವ ತಂತ್ರ ಎಂಬುದಾಗಿ ಬಣ್ಣಿಸಲಾಗಿದೆ.

ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿರುವ ಹಣವನ್ನು ತಡೆಯಲು ಪಾಕಿಸ್ತಾನ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದರ ಕುರಿತ ತನ್ನ ಅಂತಿಮ ವರದಿಯನ್ನು ಎಫ್‌ಎಟಿಎಫ್ ಈ ಸಭೆಯಲ್ಲಿ ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News