ತಬ್ರೇಝ್ ಅನ್ಸಾರಿ ಹೃದಯಾಘಾತಕ್ಕೆ ಗುಂಪು ಹಲ್ಲೆ ಕಾರಣ: ವೈದ್ಯರ ತಂಡ

Update: 2019-09-12 15:51 GMT

ಪಾಟ್ನಾ, ಸೆ. 12: ಜಾರ್ಖಂಡ್‌ನಲ್ಲಿ ಗುಂಪಿನ ಹಲ್ಲೆಯಿಂದ ಆದ  ಗಂಭೀರ ಗಾಯಗಳಿಂದ ಉಂಟಾದ ಆಘಾತದಿಂದ 24ರ ಹರೆಯದ ತಬ್ರೇಝ್ ಅನ್ಸಾರಿಗೆ ಹೃದಯಾಘಾತ ಸಂಭವಿಸಿದೆ ಎಂದು ಜೆಮ್ಶೆದ್‌ಪುರ ವೈದ್ಯಕೀಯ ಕಾಲೇಜಿನ ವಿವಿಧ ಶಿಸ್ತುಗಳ 5 ವಿಭಾಗಗಳ ಮುಖ್ಯಸ್ಥರು ಸಹಿ ಹಾಕಿದ ವೈದ್ಯಕೀಯ-ಕಾನೂನು ದಾಖಲೆಗಳು ತಿಳಿಸಿವೆ.

ಗಟ್ಟಿಯಾದ ಹಾಗೂ ಮೊಂಡು ಆಯುಧದಿಂದ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಎಲುಬುಗಳು ಮುರಿದಿವೆ. ಮೂಳೆ ಮುರಿದಿರುವುದು, ಆಂತರಿಕ ಅಂಗಗಳು ಘಾಸಿಕೊಂಡಿರುವುದು ಹಾಗೂ ಹೃದಯದ ಕವಾಟಗಳಲ್ಲಿ ರಕ್ತ ತುಂಬಿಕೊಂಡಿರುವುದು ಮೊದಲಾದ ಕಾರಣದಿಂದ ಹೃದಯಾಘಾತ ಸಂಭವಿಸಿದೆ ಎಂದು ಐವರು ವೈದ್ಯರು ಸಹಿ ಹಾಕಿದ ದಾಖಲೆ ಹೇಳಿದೆ. ಇದರ ಹೊರತಾಗಿಯೂ ತಬ್ರೇಝ್ ಅನ್ಸಾರಿ ಮೇಲೆ ಹಲ್ಲೆ ನಡೆಸಿದ 11 ಮಂದಿ ವಿರುದ್ಧದ ಕೊಲೆ ಆರೋಪವನ್ನು ಜಾರ್ಖಂಡ್ ಪೊಲೀಸರು ಹಿಂದೆ ತೆಗೆದಿದ್ದಾರೆ. ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಂದಿರುವುದೇ ಇದಕ್ಕೆ ಕಾರಣ. ಆದರೆ, ಹಲ್ಲೆಯಿಂದ ಆದ ಗಾಯಗಳೇ ಹೃದಯಾಘಾತಕ್ಕೆ ಕಾರಣ ಎಂಬ ಯಾವುದೇ ಉಲ್ಲೇಖವನ್ನು ಪೊಲೀಸರು ದಾಖಲಿಸಿಲ್ಲ.

ಮರಣೋತ್ತರ ಪರೀಕ್ಷೆ ನಡೆಸಿದ್ದ ತಂಡದಲ್ಲಿದ್ದ ಓರ್ವ ವೈದ್ಯ, ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ‘‘ಒತ್ತಡದಿಂದ ಹೃದಯಾಘಾತ ಸಂಭವಿಸಿರಬಹುದು. ಒತ್ತಡಕ್ಕೆ ಹಲವು ಕಾರಣಗಳಲ್ಲಿ ಗಂಭೀರ ಘಾಷಿಗೊಂಡಿರುವುದು ಕೂಡ ಒಂದು ಕಾರಣವಾಗಿರಬಹುದು’’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ. ಬಿ. ಮಾರ್ಡಿ ಹೇಳಿದ್ದಾರೆ. ಇದು ನನ್ನ ವರದಿ ಮಾತ್ರವಲ್ಲ. ವೈದ್ಯರ ತಂಡದ ವರದಿ. ಆಂತರಿಕ ಅಂಗಗಳಲ್ಲಿ ವಿಷದ ಅಂಶ ಕಂಡು ಬಂದಿಲ್ಲ ಎಂದು ಡಾ. ಬಿ. ಮಾರ್ಡಿ ತಿಳಿಸಿದ್ದಾರೆ.

ತಬ್ರೇಝ್ ಅನ್ಸಾರಿ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣ ಕುರಿತ ಕಳೆದ ತಿಂಗಳು ಮಾಧ್ಯಮದಲ್ಲಿ ವರದಿ ಪ್ರಕಟವಾದ ಬಳಿಕ, ಆರೋಪ ಪಟ್ಟಿ ಕುರಿತು ವಿವಾದ ಉದ್ಭವಿಸಿತ್ತು. ಅನಂತರ ಪೊಲೀಸರು, ತಬ್ರೇಝ್ ಅನ್ಸಾರಿ ದಾಳಿ ಪ್ರಕರಣದ 11 ಆರೋಪಿಗಳ ವಿರುದ್ಧ ಕೊಲೆಯಲ್ಲದ ದಂಡನೀಯವಾದ ನರಹತ್ಯೆಯ ಆರೋಪ ದಾಖಲಿಸಲಾಗಿದೆ ಎಂದಿದ್ದರು. ಕಳೆದ ವಾರ ಶರಣಾಗತನಾದ 11ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News