ಬಲೂಚಿಸ್ತಾನದಲ್ಲಿನ ಪಾಕ್ ಸೇನೆಯಿಂದ ದೌರ್ಜನ್ಯ

Update: 2019-09-12 15:39 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 12: ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಜಿನೀವದಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಭಾರತವನ್ನು ಖಂಡಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಬಲೂಚ್ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಪಾಕಿಸ್ತಾನಿ ಸೇನೆಯು ತನ್ನದೇ ಹಿತ್ತಿಲು ಬಲೂಚಿಸ್ತಾನದಲ್ಲಿ ನಡೆಸುತ್ತಿದೆಯೆನ್ನಲಾದ ದೌರ್ಜನ್ಯಗಳತ್ತ ಅವರು ಜಗತ್ತಿನ ಗಮನ ಸೆಳೆದಿದ್ದಾರೆ.

‘ಪಾಕಿಸ್ತಾನದ ನಿರಂಕುಶತೆ’ಯನ್ನು ಪ್ರಪಂಚದ ಗಮನಕ್ಕೆ ತರುವುದಕ್ಕಾಗಿ ಬಲೂಚ್ ಹ್ಯೂಮನ್ ರೈಟ್ಸ್ ಕೌನ್ಸಿಲ್ ಮತ್ತು ಪಶ್ತೂನ್ಸ್ ಕಾರ್ಯಕರ್ತರು ವಿಶ್ವಸಂಸ್ಥೆಯ ಹೊರಗೆ ಬ್ಯಾನರ್‌ಗಳನ್ನು ಹಾಕಿದ್ದಾರೆ.

‘‘ಪಾಕಿಸ್ತಾನವು ನಾಗರಿಕ ದೇಶವಲ್ಲ. ಬಲೂಚಿಸ್ತಾನ, ಸಿಂಧ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅದು ನಡೆಸುತ್ತಿರುವ ದೌರ್ಜನ್ಯಗಳನ್ನು ಗಮನಿಸಿದರೆ, ಕಾಶ್ಮೀರಿಗಳ ಮಾನವಹಕ್ಕುಗಳ ಬಗ್ಗೆ ಮಾತನಾಡಲು ಅದಕ್ಕೆ ನಾಚಿಕೆಯಾಗಬೇಕು’’ ಎಂದು ಬಲೂಚ್ ಮೂವ್‌ಮೆಂಟ್‌ನ ಸಂಘಟಕ ರಝಾಕ್ ಬಲೂಚ್ ಹೇಳಿದರು.

ಪಾಕಿಸ್ತಾನದಿಂದ ಸ್ವಾತಂತ್ರ ಪಡೆಯುವುದಕ್ಕಾಗಿ ಬಲೂಚ್ ಮೂವ್‌ಮೆಂಟ್ ಹೋರಾಡುತ್ತಿದೆ.

ಬಲೂಚ್ ಕಾರ್ಯಕರ್ತರು ಜಿನೀವದಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಡೇರೆಗಳನ್ನು ನಿರ್ಮಿಸಿ ಪಾಕಿಸ್ತಾನದ ವಿರುದ್ಧದ ಘೋಷಣೆಗಳನ್ನು ಕೂಗಿದರು.

ಬಲೂಚಿಸ್ತಾನವು ಪಾಕಿಸ್ತಾನದ ಸೇನೆಯ ಆಕ್ರಮಣದಲ್ಲಿದೆ ಹಾಗೂ ಬಲೂಚಿಸ್ತಾನದ ಸಾರ್ವಭೌಮತೆಯ ಹೊರತಾಗಿ ಅದಕ್ಕಿಂತ ಕೆಳಗಿನ ಯಾವ ಸ್ಥಾನಮಾನವೂ ಅಲ್ಲಿನ ಜನರಿಗೆ ಸ್ವೀಕಾರಾರ್ಹವಲ್ಲ ಎಂದು ರಝಾಕ್ ಬಲೂಚ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News