ಮುಕೇಶ್ ಅಂಬಾನಿ ಹೇಳಿಕೆಗೆ ಫೇಸ್ ಬುಕ್ ವಿರೋಧ

Update: 2019-09-12 17:52 GMT

ಹೊಸದಿಲ್ಲಿ, ಸೆ.12: ದತ್ತಾಂಶ(ಡೇಟಾ)ವು ಹೊಸ ತೈಲದಂತೆ ಅಮೂಲ್ಯವಾಗಿದ್ದು, ಭಾರತೀಯ ಬಳಕೆದಾರರ ದತ್ತಾಂಶ ಮಾಹಿತಿಯನ್ನು ಸಂರಕ್ಷಿಸಬೇಕು ಎಂಬ ಉದ್ಯಮಿ ಮುಕೇಶ್ ಅಂಬಾನಿ ಹೇಳಿಕೆಯನ್ನು ವಿರೋಧಿಸಿರುವ ಫೇಸ್‌ಬುಕ್ ಸಂಸ್ಥೆ, ದತ್ತಾಂಶದ ಮುಕ್ತ ಹರಿವಿಗೆ ಭಾರತ ಅವಕಾಶ ಮಾಡಿಕೊಡಬೇಕು ಎಂದಿದೆ.

ಇಂಟರ್‌ನೆಟ್ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯ ಬಳಕೆದಾರರು ಸಂಗ್ರಹಿಸುವ ದತ್ತಾಂಶ ಮಾಹಿತಿಯನ್ನು ಸಂರಕ್ಷಿಸಬೇಕು. ದೇಶಕ್ಕೆ ಸಂಬಂಧಿಸಿದ ದತ್ತಾಂಶ ಮಾಹಿತಿಯ ಮಾಲಕತ್ವ ಭಾರತದ ಜನರಲ್ಲಿರಬೇಕು ಮತ್ತು ಅವರೇ ನಿಯಂತ್ರಿಸಬೇಕು ಎಂದು ಮುಕೇಶ್ ಅಂಬಾನಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್ ಉಪಾಧ್ಯಕ್ಷ (ಜಾಗತಿಕ ವ್ಯವಹಾರ ಮತ್ತು ಸಂವಹನ) ನಿಕ್ ಕ್ಲೆಗ್, ಭಾರತದಲ್ಲಿ ಹಾಗೂ ವಿಶ್ವದಲ್ಲಿ ಹಲವರು ದತ್ತಾಂಶವು ಹೊಸ ತೈಲದಂತೆ ಎಂದು ಭಾವಿಸುತ್ತಾರೆ. ದೇಶದೊಳಗೆ ತೈಲದ ಅಪಾರ ಸಂಗ್ರಹವಿದ್ದರೆ ಸಮೃದ್ಧಿಗೆ ಪೂರಕ ಎಂಬುದು ಈ ಚಿಂತನೆಯ ಸಾರಾಂಶ. ಆದರೆ ತೈಲವನ್ನು ದತ್ತಾಂಶದೊಂದಿಗೆ ಹೋಲಿಸುವುದು ತಪ್ಪು ಗ್ರಹಿಕೆಯಾಗಿದೆ. ಇದನ್ನು ಬೇಕಿದ್ದರೆ ನೀರಿನೊಂದಿಗೆ ಹೋಲಿಸಬಹುದು. ಜಾಗತಿಕ ಇಂಟರ್‌ನೆಟ್ ಹರಿವು, ಉಬ್ಬರವಿಳಿತವಿರುವ, ಗಡಿಗಳ ಚೌಕಟ್ಟು ಇರದ ಬೃಹತ್ ಸಾಗರವಾಗಿದೆ ಎಂದಿದ್ದಾರೆ.

ದತ್ತಾಂಶ ಮಾಹಿತಿ ಹಂಚಿಕೊಳ್ಳುವುದು ದೇಶದ ಭದ್ರತೆಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಗಂಭೀರ ಅಪರಾಧ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಿರ್ಮೂಲನಗೊಳಿಸುವ ಉದ್ದೇಶದ ಪ್ರಮುಖ ಜಾಗತಿಕ ದತ್ತಾಂಶ ಮಾಹಿತಿ ಪ್ರಕ್ರಿಯೆಗಳನ್ನು ಭಾರತ ಸ್ವಯಂ ತಡೆಹಿಡಿದಿದೆ. ಭಾರತವು ವೈಯಕ್ತಿಕ ಹಕ್ಕುಗಳನ್ನು ಗೌರವಿಸುವ, ಸ್ಪರ್ಧೆ ಮತ್ತು ನೂತನ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಮತ್ತು ಎಲ್ಲರಿಗೂ ಮುಕ್ತವಾಗಿರುವ ಮತ್ತು ಎಲ್ಲರಿಗೂ ಪ್ರವೇಶಿಸಬಹುದಾದ ಹೊಸ ಸಿದ್ಧವಿನ್ಯಾಸದ ಪುಟವನ್ನು ಇಂಟರ್‌ನೆಟ್‌ಗೆ ರೂಪಿಸಬೇಕು. ಪರಿಮಿತ ವಸ್ತುವಿನಂತೆ ದತ್ತಾಂಶವನ್ನು ಸಂಗ್ರಹಿಸಿದರೆ ದತ್ತಾಂಶದ ವೌಲ್ಯ ಅರಿವಿಗೆ ಬರುವುದಿಲ್ಲ. ಅದನ್ನು ಹೊಸ ಶೋಧನೆಗೆ ಮುಕ್ತವಾಗಿಸಿದರೆ ವೌಲ್ಯ ಹೆಚ್ಚುತ್ತದೆ. ಇದರಿಂದ ಭಾರತಕ್ಕೆ ಹೆಚ್ಚಿನ ಸಂಪತ್ತು ಒದಗುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News