×
Ad

ಹೊಸ ಸಂಸತ್ ಭವನ; ಕೇಂದ್ರ ಸರ್ಕಾರದ ಮೆಗಾ ಪ್ಲಾನ್ ಏನು?

Update: 2019-09-13 09:23 IST

ಹೊಸದಿಲ್ಲಿ, ಸೆ.13: ದೇಶದ ರಾಜಕೀಯ ಶಕ್ತಿಕೇಂದ್ರ ರಾಷ್ಟ್ರಭವತಿ ಭವನದ ಗೇಟ್‌ನಿಂದ ಇಂಡಿಯಾ ಗೇಟ್‌ವರೆಗಿನ ಪ್ರದೇಶದ ಮರುಯೋಜನೆ ಮತ್ತು ಮರು ಅಭಿವೃದ್ಧಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಎಡ್ವಿನ್ ಲುಟೇನ್ಸ್ ವಿನ್ಯಾಸಗೊಳಿಸಿದ ಈ ಆಕರ್ಷಕ ನಾಲ್ಕು ಚದರ ಕಿಲೋಮೀಟರ್ ಪ್ರದೇಶದ ಮರು ಅಭಿವೃದ್ಧಿಯ ಮೆಗಾ ಪ್ಲಾನ್ ಅನ್ವಯ ಹಾಲಿ ಇರುವ ಸಂಸತ್ ಭವನದ ಪಕ್ಕ ಹೊಸ ಸಂಸತ್ ಭವನ ನಿರ್ಮಾಣ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತದೆ. ಇದು ಸಾಧ್ಯವಾಗದಿದ್ದರೆ ಭವಿಷ್ಯದ ಅಗತ್ಯತೆಗೆ ಅನುಗುಣವಾಗಿ ಪ್ರಸಕ್ತ ಕಟ್ಟಡವನ್ನು ನವೀಕರಿಸಲಾಗುತ್ತದೆ. ಅಂತೆಯೇ ಬಹುತೇಕ ಎಲ್ಲ ಸಚಿವಾಲಯಗಳಿಗೆ ಸ್ಥಳಾವಕಾಶ ಕಲ್ಪಿಸುವ ಕೇಂದ್ರ ಸೆಕ್ರೇಟರಿಯೇಟ್ ನಿರ್ಮಿಸುವ ಮೂಲಕ ಈ ಭಾಗವನ್ನು ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆ, ಇಡೀ ಪ್ರದೇಶದ ಅಭಿವೃದ್ಧಿಗೆ ಹೊಸ ಮಾಸ್ಟರ್‌ಪ್ಲಾನ್ ತಯಾರಿಸಲು ಈಗಾಗಲೇ ಬಿಡ್ ಆಹ್ವಾನಿಸಿದೆ. ಉತ್ತಮ ಆಡಳಿತ, ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಮಾನತೆಯ ತತ್ವಗಳ ನವಭಾರತದ ಮೌಲ್ಯ ಮತ್ತು ನಿರೀಕ್ಷೆಗಳನ್ನು ಪ್ರತಿನಿಧಿಸುವ, ಭಾರತೀಯ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ವಿನ್ಯಾಸಕ್ಕೆ ಉದ್ದೇಶಿಸಲಾಗಿದೆ.

ಸಾರ್ವಜನಿಕ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು, ಮೂಲಸೌಕರ್ಯ, ಪಾರ್ಕಿಂಗ್ ಮತ್ತು ಹಸಿರು ಪ್ರದೇಶವನ್ನು ಮೇಲ್ದರ್ಜೆಗೇರಿಸುವುದು ಯೋಜನೆಯಲ್ಲಿ ಸೇರಿದೆ. ಹೊಸದಾಗಿ ಕ್ಷೇತ್ರ ಮರುವಿಂಗಡಣೆಯಾದಾಗ ಹೆಚ್ಚಿನ ಸಂಸದರಿಗೆ ಸದ್ಯ ಇರುವ ಸಂಸತ್ ಭವನದಲ್ಲಿ ಸ್ಥಳಾವಕಾಶ ಕಲ್ಪಿಸುವುದು ಕಷ್ಟ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. 2024ರೊಳಗೆ ಯೋಜನೆ ಪೂರ್ಣಗೊಳಿಸುವ ಇರಾದೆ ಸರ್ಕಾರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News