ನಾರಾಯಣಗುರು ಹೆಸರಿನಲ್ಲಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ: ಕೋಟ ಶ್ರೀನಿವಾಸ ಪೂಜಾರಿ

Update: 2019-09-13 08:25 GMT

ಉಡುಪಿ ಸೆ.13: ಸಮಾಜದ ದಮನಿತ ವರ್ಗದ ಜನರ ಧ್ವನಿಗೆ ಶಕ್ತಿ ಕೊಡುವ ಮೂಲಕ ಅವರ ಏಳಿಗೆಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪಿಸುವ ಕುರಿತು ಬೆಂಗಳೂರಿನಲ್ಲಿ ನಡೆಯುವ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೆನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಶುಕ್ರವಾರ ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಜಿಲ್ಲಾ ಬಿಲ್ಲವ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೆ ನಾರಾಯಣ ಗುರುಗಳ 165ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾಸಿದ ನಾರಾಯಣ ಗುರುಗಳ ಸಂದೇಶ ಇಂದು ಅತ್ಯಂತ ಪ್ರಸಕ್ತವಾಗಿದೆ. ಇಡೀ ಪ್ರಪಂಚ ಒಂದೇ ಕುಟುಂಬದಂತೆ ಶಾಂತಿ, ಸಮಾನತೆ, ಸಹಬಾಳ್ವೆಯಿಂದ ಬದುಕಬೇಕೆಂದು ಗುರುಗಳು ಬಯಸಿದ್ದರು. ಅವರು ಜಗತ್ತಿಗೇ ಸಾರಿದ ಸಮಾನತೆಯ ಸಂದೇಶ ಪ್ರತಿಯೊಬ್ಬರಿಗೂ ಆದರ್ಶ ಎಂದು ಅವರು ತಿಳಿಸಿದರು.

ಅಸ್ಪಶ್ಯತೆ, ಮೇಲು ಕೀಳೆಂಬ ಭೇದಭಾವಗಳು ತಾಂಡವವಾಡುತ್ತಿದ್ದ ಕಾಲ ಘಟ್ಟದಲ್ಲಿ ಜನಿಸಿದ ನಾರಾಯಣಗುರು, ಸಮಾಜದ ಶೋಷಿತರ ಧ್ವನಿಯಾಗಿ, ಕ್ರಾಂತಿಯ ಕಿಡಿಯನ್ನು ಹಚ್ಚಿ, ಭಾಷೆಗೆ ಬರಹದ ಮೂರ್ತರೂಪ ನೀಡಿದರು. ಮನುಕುಲದಲ್ಲಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿ, ಜನರಲ್ಲಿ ವಿದ್ಯೆಯ ಮೂಲಕ ಅರಿವನ್ನು ಮೂಡಿಸಿದರು. ನಾರಾಯಣ ಗುರು ಸಾರಿದ ಸಮಾನತೆಯನ್ನು ಒಪ್ಪಿಕೊಂಡು, ಅಸ್ಪಶ್ಯತೆ ಆಚರಣೆ ಇಲ್ಲದ ರಾಜ್ಯದ ಜಿಲ್ಲೆಗಳೆಂದರೆ ಬಹುಶಃ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮಾತ್ರ. ನಾರಾಯಣ ಗುರುಗಳ ತತ್ವ ಮತ್ತು ಆದರ್ಶದ ಹಾದಿಯಲ್ಲಿಯೇ ಸಚಿವನಾಗಿ ಕರ್ತವ್ಯ ನಿರ್ವಹಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಪಂ ಸದಸ್ಯರಾದ ಜನಾರ್ದನ ತೋನ್ಸೆ, ಗೀತಾಂಜಲಿ ಸುವರ್ಣ, ಶಿಲ್ಪಾಸುವರ್ಣ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಗೌರವಾಧ್ಯಕ್ಷ ಶಿವಾನಂದ್ ಉಪಸ್ಥಿತರಿದ್ದರು.

ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು. ದಯಾನಂದ ಉಗ್ಗೆಲ್‌ಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸಪ್ನಾ ಮತ್ತು ನಾಗರಾಜ ಶೇಟ್ ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News