ಮಣಿಪಾಲ: ಮಹಿಳೆಯ ಸರ ಅಪಹರಣ; ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನ

Update: 2019-09-13 11:55 GMT

ಮಣಿಪಾಲ, ಸೆ.13: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿಕೋಡಿಯಲ್ಲಿ ಸೆ.12ರಂದು ಬೆಳಗ್ಗೆ ಮಹಿಳೆಯ ಚಿನ್ನದ ಸರ ಸುಲಿಗೆ ಮಾಡಿದ ಆರೋಪಿಯನ್ನು ಕೆಲವೇ ಗಂಟೆಗಳೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಚಿಕುಮೇರಿಯ ಪ್ರವೀಣ ನಾಯ್ಕ(32) ಬಂಧಿತ ಆರೋಪಿ.

ಮಂಚಿಕೋಡಿಯ ಮಾಧು ನಾಯ್ಕ ಎಂಬವರ ಮಗಳು ಲಲಿತಾ ನಾಯ್ಕ ಮಣಿಪಾಲ ಪ್ರೆಸ್‌ಗೆ ಕೆಲಸಕ್ಕೆಂದು ಮನೆಯಿಂದ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಚಿಕೋಡಿ ಗದ್ದೆಯ ಬಳಿ ತಲೆಗೆ ಕೆಂಪು ಬಣ್ಣದ ಹೆಲ್ಮೆಟ್ ಹಾಗೂ ರೈನ್‌ಕೋಟ್ ಧರಿಸಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಲಲಿತಾ  ಬಳಿ ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದನು.

ಈ ಬಗ್ಗೆ ಲಲಿತಾ ನಾಯ್ಕ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಲ್ಲದೇ ತನ್ನದೇ ಊರಿನ ಪರಿಚಯ ಇರುವ ಪ್ರವೀಣ ನಾಯ್ಕ ಎಂಬಾತನೇ ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಡಿವೈಎಸ್ಪಿ ಟಿ.ಜೈಶಂಕರ್ ಮಾರ್ಗದರ್ಶನದಲ್ಲಿ ಮಣಿಪಾಲ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಎ. ಹಾಗೂ ಎಸ್ಸೈ ಶ್ರೀಧರ ನಂಬಿಯಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಅಂದರೆ ಸೆ.12ರಂದು ಅಪರಾಹ್ನ 3.30ರ ಸುಮಾರಿಗೆ ಆರೋಪಿಯನ್ನು ಆತನ ಮನೆಯ ಬಳಿ ಬಂಧಿಸಿದ್ದಾರೆ.

ಬಂಧಿತನಿಂದ ಸುಲಿಗೆ ಮಾಡಿದ 9,000 ರೂ. ಮೌಲ್ಯದ ಅರ್ಧ ತುಂಡಾದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮಣಿಪಾಲ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News