ನ.4-15ರವರೆಗೆ ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ವಾಹನ ಸಂಚಾರ ನಿಯಮ ಜಾರಿ: ಕೇಜ್ರಿವಾಲ್

Update: 2019-09-13 15:40 GMT

ಹೊಸದಿಲ್ಲಿ,ಸೆ.13: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯುಮಾಲಿನ್ಯದ ಪಿಡುಗನ್ನು ನಿಯಂತ್ರಿಸುವ ಪ್ರಯತ್ನವಾಗಿ ನವೆಂಬರ್‌ನಲ್ಲಿ ಸಮ ಸಂಖ್ಯೆ ಹಾಗೂ ಬೆಸಸಂಖ್ಯೆಯ ನೋಂದಣಿಯಿರುವ ವಾಹನಗಳನ್ನು ಪ್ರತ್ಯೇಕವಾಗಿ ಎರಡು ದಿನಗಳಿಗೊಮ್ಮೆ ಸಂಚರಿಸುವಂತೆ ಮಾಡುವ ಯೋಜನೆಯನ್ನು ನವೆಂಬರ್‌ನಲ್ಲಿ ಮರಳಿ ಜಾರಿಗೆ ತರುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಪ್ರಕಟಿಸಿದ್ದಾರೆ.

  ದಿಲ್ಲಿಯಲ್ಲಿ ಸಮ-ಬೆಸ ಸಂಖ್ಯೆಯ ವಾಹನಗಳನ್ನು ಪ್ರತ್ಯೇಕವಾಗಿ ಎರಡು ದಿನಗಳಿಗೊಮ್ಮೆ ಸಂಚರಿಸಲು ಅವಕಾಶ ನೀಡುವ ಯೋಜನೆಯು ನವೆಂಬರ್ 4ರಂದು ಜಾರಿಗೆ ಬರಲಿದ್ದು, ಅದು ನವೆಂಬರ್ 15ರವರೆಗೂ ಮುಂದುವರಿಯಲಿದೆ. ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸುವ ಯೋಜನೆಯನ್ನೂ ಕೇಜ್ರಿವಾಲ್ ಪ್ರಕಟಿಸಿದ್ದಾರೆ ಹಾಗೂ ವಿದ್ಯುತ್‌ ಚಾಲಿತ ಲಕ್ಸುರಿ ಬಸ್‌ಗಳಿಗೆ ಹೂಡಿಕೆ ಮಾಡುವಂತೆ ಅವರು ಕಾರ್ಪೋರೇಟ್ ಉದ್ಯಮಸಂಸ್ಥೆಗಳಿಗೂ ಆಹ್ವಾನ ನೀಡಿದ್ದಾರೆ.

 ಸದ್ಯದಲ್ಲೇ ಸಮಗ್ರ ಬಸ್ ನೀತಿಯೊಂದನ್ನು ಪ್ರಕಟಿಸಲಾಗುವುದೆಂದು ತಿಳಿಸಿದ ಕೇಜ್ರಿವಾಲ್, ರಾಜಧಾನಿ ಹೊಸದಿಲ್ಲಿಯಲ್ಲಿ 1 ಸಾವಿರ ಇಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಾಗುವುದು ಎಂದರು.

‘‘ ನೀವು ದೀರ್ಘಾವಧಿಗೆ ಸಮ-ಬೆಸ ಸಂಖ್ಯೆಯ ವಾಹನಗಳ ಪ್ರತ್ಯೇಕ ಸಂಚಾರ ಯೋಜನೆಯನ್ನು ಹೇರಿದಲ್ಲಿ ಅವುಗಳ ಅನುಷ್ಠಾನವು ಕಷ್ಟಕರವಾಗುತ್ತದೆ. ಸದ್ಯದಮಟ್ಟಿಗೆ ಸಮ-ಬೆಸ ನಿಯಮವು ನೆವೆಂಬರ್4-15ರವರೆಗೆ ಸೀಮಿತವಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ತಿಳಿಸಿದರು. ಆದರೆ ಆ್ಯಂಬುಲೆನ್ಸ್ ಮತ್ತಿತರ ತುರ್ತು ಸೇವಾ ವಾಹನಗಳಿಗೆ ಸಮ-ಬೆಸ ನಿಯಮ ಅನ್ವಯವಾಗುವುದಿಲ್ಲವೆಂದವರು ತಿಳಿಸಿದ್ದಾರೆ. ದೀಪಾವಳಿಯಲ್ಲಿ ಪಟಾಕಿಗಳ ಕುರಿತಾದ ಸುಪ್ರೀಂಕೋರ್ಟ್‌ನ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದೆಂದು ಹೇಳಿದ ಕೇಜ್ರಿವಾಲ್ ದಿಲ್ಲಿಯ ಜನತೆ ಗಿಡನೆಡುವಿಕೆ ಆಂದೋಲದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News