ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಲು ಪಿಸಿಬಿ ನಕಾರ

Update: 2019-09-13 17:31 GMT

ಲಾಹೋರ್, ಸೆ.13: ಈ ತಿಂಗಳಾಂತ್ಯಕ್ಕೆ ನಿಗದಿಯಾಗಿರುವ ಶ್ರೀಲಂಕಾ ವಿರುದ್ಧ ಸ್ವದೇಶಿ ಸರಣಿಯನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸ್ಪಷ್ಟವಾಗಿ ನಿರಾಕರಿಸಿದೆ.

ಪಾಕಿಸ್ತಾನ ಪ್ರವಾಸದ ವೇಳೆ ಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಲಂಕಾದ ಪ್ರಧಾನಮಂತ್ರಿ ಕಚೇರಿ ಖಚಿತ ಮಾಹಿತಿ ಸ್ವೀಕರಿಸುವ ಮೊದಲು ಶ್ರೀಲಂಕಾದ ಪಾಕಿಸ್ತಾನ ಪ್ರವಾಸ ನಿಶ್ಚಿತವಾಗಿತ್ತು. ಇದೀಗ ಆತಂಕಕ್ಕೀಡಾಗಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಪ್ರವಾಸವನ್ನು ಮರು ಪರಿಶೀಲಿಸುವ ಯೋಜನೆ ಹಾಕಿಕೊಳ್ಳುವ ಅಗತ್ಯವಿದೆ ಎಂದಿದೆ.

ಪಿಸಿಬಿ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿದ್ದು, ಸರಣಿಯನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸುವ ಯಾವುದೇ ಸಾಧ್ಯತೆಯಿಲ್ಲ ಎಂದಿದೆ. ಒಂದು ವೇಳೆ ಸರಣಿಯನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ಖಾಯಂ ಆಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ್ನು ವಾಪಸ್ ತರುವ ಯೋಜನೆ ಗೊಂದಲಕ್ಕೆ ಸಿಲುಕಲಿದೆ. ಸರಣಿಯನ್ನು ಸ್ಥಳಾಂತರಗೊಳಿಸಿದರೆ ಮುಂಬರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ನಲ್ಲಿ ವಿದೇಶಿ ಆಟಗಾರರನ್ನು ಮನವರಿಕೆ ಮಾಡುವುದು ಕಷ್ಟವಾಗುತ್ತದೆ ಎಂದು ಪಿಸಿಬಿ ನಂಬಿದೆ. ಶ್ರೀಲಂಕಾ ತಂಡ ಪಾಕ್ ವಿರುದ್ಧ ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಸೆ.27 ಹಾಗೂ ಅಕ್ಟೋಬರ್ 9ರ ತನಕ ಕರಾಚಿ ಹಾಗೂ ಲಾಹೋರ್‌ನಲ್ಲಿ ಆಡಬೇಕಾಗಿತ್ತು.

ಇತ್ತೀಚೆಗೆ ಶ್ರೀಲಂಕಾದ 10 ಹಿರಿಯ ಆಟಗಾರರು ಪಾಕ್‌ನಲ್ಲಿ ಭದ್ರತೆಯ ಭೀತಿಯಿದೆ ಎಂದು ಹೇಳಿಕೊಂಡು ಪಾಕ್ ಪ್ರವಾಸದಿಂದ ಹಿಂದೆ ಸರಿದಿದ್ದರು. ಆ ಬಳಿಕ ಲಹಿರು ತಿರಿಮನ್ನೆ ಅವರನ್ನು ಲಂಕಾದ ಏಕದಿನ ತಂಡದ ನಾಯಕನಾಗಿಯೂ, ದಸುನ್ ಶನಕರನ್ನು ಟ್ವೆಂಟಿ-20 ತಂಡದ ನಾಯಕನಾಗಿಯೂ ಆಯ್ಕೆ ಮಾಡಲಾಗಿತ್ತು.

2009ರ ಮಾರ್ಚ್‌ನಲ್ಲಿ ಲಾಹೋರ್‌ನ ಕ್ರಿಕೆಟ್ ಸ್ಟೇಡಿಯಂನತ್ತ ತೆರಳುತ್ತಿದ್ದ ಪ್ರವಾಸಿ ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ ಬಳಿಕ ಪಾಕ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ್ನು ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News