ಇಂಗ್ಲೆಂಡ್ 294 ರನ್‌ಗೆ ಆಲೌಟ್

Update: 2019-09-13 17:34 GMT

ಲಂಡನ್, ಸೆ.13: ಐದು ವಿಕೆಟ್‌ಗಳ ಗೊಂಚಲು ಕಬಳಿಸಿದ ಆಸ್ಟ್ರೇಲಿಯ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಇಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 294 ರನ್‌ಗೆ ನಿಯಂತ್ರಿಸಿದರು.

8 ವಿಕೆಟ್‌ಗಳ ನಷ್ಟಕ್ಕೆ 271 ರನ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್ ನಿನ್ನೆಯ ಮೊತ್ತಕ್ಕೆ ಕೇವಲ 23 ರನ್ ಸೇರಿಸುವಷ್ಟರಲ್ಲಿ ಕೊನೆಯ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು.

ಜೋಸ್ ಬಟ್ಲರ್(70 ರನ್)ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್‌ನ ಹೋರಾಟ ಬಹುತೇಕ ಕೊನೆಗೊಂಡಿತು. ಬಟ್ಲರ್ ಅವರು ಬಾಲಂಗೋಚಿ ಲೀಚ್(21) ಅವರೊಂದಿಗೆ 9ನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಸನಿಹ ತಲುಪಿಸಿದರು.

ಬಟ್ಲರ್ ಔಟಾಗುವ ಮೊದಲು ಇಂಗ್ಲೆಂಡ್‌ನ ಪರ ಮೊದಲ ಇನಿಂಗ್ಸ್‌ನಲ್ಲಿ ಗರಿಷ್ಠ ವೈಯಕ್ತಿಕ ಕೊಡುಗೆ(70, 98 ಎಸೆತ, 7 ಬೌಂಡರಿ, 3 ಸಿಕ್ಸರ್) ನೀಡಿದರು.

ಮಾರ್ಷ್ 46 ರನ್‌ಗೆ ಐದು ವಿಕೆಟ್‌ಗಳನ್ನು ಉರುಳಿಸಿ ಮಾರಕ ಬೌಲಿಂಗ್ ನಡೆಸಿದರೆ, ಕಮಿನ್ಸ್(3-84)ಹಾಗೂ ಹೇಝಲ್‌ವುಡ್(2-76) ಮಾರ್ಷ್‌ಗೆ ಸಮರ್ಥ ಸಾಥ್ ನೀಡಿದರು.

ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಭೋಜನ ವಿರಾಮದ ವೇಳೆಗೆ 55 ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ. ಸ್ಟೀವ್ ಸ್ಮಿತ್(ಔಟಾಗದೆ 14) ಹಾಗೂ ಮಾರ್ನಸ್ ಲಬುಸ್ಚಾಗ್ನೆ(ಔಟಾಗದೆ 32)ಆಸೀಸ್ ಪರ ಹೋರಾಟ ಮುಂದುವರಿಸಿದ್ದಾರೆ.

ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್(5)ಹಾಗೂ ಮಾರ್ಕಸ್ ಹ್ಯಾರಿಸ್(3)ಉತ್ತಮ ಆರಂಭ ಒದಗಿಸಲು ವಿಫಲರಾಗಿ 6 ಓವರ್‌ನೊಳಗೆ ಪೆವಿಲಿಯನ್‌ಗೆ ವಾಪಸಾದರು.

ಸಂಕ್ಷಿಪ್ತ ಸ್ಕೋರ್

► ಇಂಗ್ಲೆಂಡ್ ಮೊದಲ ಇನಿಂಗ್ಸ್: 87.1 ಓವರ್‌ಗಳಲ್ಲಿ 294/10

(ಬಟ್ಲರ್ 70, ರೂಟ್ 57, ಬರ್ನ್ಸ್ 47, ಮಾರ್ಷ್ 5-46, ಕಮಿನ್ಸ್ 3-84, ಹೇಝಲ್‌ವುಡ್ 2-76)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News