ಪಾಕಿಸ್ತಾನ ವಿರುದ್ಧ ಭಾರತದ ಡೇವಿಸ್ ಕಪ್ ಪಂದ್ಯ ನವೆಂಬರ್ ಅಂತ್ಯಕ್ಕೆ: ಎಐಟಿಎ

Update: 2019-09-13 17:36 GMT

ಹೊಸದಿಲ್ಲಿ, ಸೆ.13: ಭಾರತ ಹಾಗೂ ಪಾಕಿಸ್ತಾನದ ನಡುವಿನ ಡೇವಿಸ್ ಕಪ್ ಪಂದ್ಯ ಮರು ನಿಗದಿಯಾಗಿದ್ದು, ಇಸ್ಲಾಮಾಬಾದ್‌ನಲ್ಲಿ ನ.29 ಅಥವಾ 30ರಂದು ನಡೆಯುವ ಸಾಧ್ಯತೆಯಿದೆ. ಅಂತಿಮ ನಿರ್ಧಾರಕ್ಕೆ ಮೊದಲು ಮತ್ತೊಂದು ಸುತ್ತಿನ ಭದ್ರತಾ ಪರಿಶೀಲನೆ ನಡೆಯಲಿದೆ ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ)ಶುಕ್ರವಾರ ತಿಳಿಸಿದೆ.

ಡೇವಿಸ್ ಕಪ್ ಪಂದ್ಯ ಈ ಹಿಂದೆ ಇಸ್ಲಾಮಾಬಾದ್‌ನಲ್ಲಿ ಸೆಪ್ಟಂಬರ್ 14-15ರಂದು ನಿಗದಿಯಾಗಿತ್ತು. ಕಳೆದ ತಿಂಗಳು ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ(ಐಟಿಎಫ್)ಆಳವಾದ ಭದ್ರತಾ ಪರಿಶೀಲನೆ ನಡೆಸಿದ ಬಳಿಕ ನವೆಂಬರ್‌ಗೆ ಪಂದ್ಯವನ್ನು ಮುಂದೂಡಿತ್ತು. ನವೆಂಬರ್ 4 ರಂದು ನಡೆಯಲಿರುವ ಭದ್ರತಾ ಪರಿಶೀಲನೆಯ ಬಳಿಕ ಡೇವಿಸ್ ಕಪ್ ಪಂದ್ಯ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆಯೇ ಅಥವಾ ತಟಸ್ಥ ತಾಣಕ್ಕೆ ಸ್ಥಳಾಂತರವಾಗಲಿದೆಯೇ ಎಂದು ನಿರ್ಧಾರವಾಗಲಿದೆ ಎಂದು ಎಐಟಿಎ ತಿಳಿಸಿದೆ.

ಭಾರತ -ಪಾಕ್ ನಡುವಿನ ಡೇವಿಸ್ ಕಪ್ ಪಂದ್ಯ ಇಸ್ಲಾಮಾಬಾದ್‌ನಲ್ಲಿ ನವೆಂಬರ್ 29 ಹಾಗೂ 30 ಅಥವಾ ನವೆಂಬರ್ 30 ಅಥವಾ ಡಿಸೆಂಬರ್ 1 ರಂದು ನಡೆಯಲಿದೆ. ನ.4ರಂದು ಭದ್ರತೆಯ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. ಆಗ ಎಲ್ಲಿ ಪಂದ್ಯ ನಡೆಸುವುದೆಂದು ನಿರ್ಧರಿಸಲಾಗುವುದು ಎಂದು ಎಐಟಿಎ ತಿಳಿಸಿದೆ.

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ನೆಲೆಸಿದ್ದು, ಡೇವಿಸ್ ಪಂದ್ಯವನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬೇಕು ಅಥವಾ ಮುಂದೂಡಬೇಕೆಂದು ಭಾರತ ಮಾಡಿದ್ದ ಮನವಿಯನ್ನು ಆಗಸ್ಟ್ 22ರಂದು ನಡೆದ ಐಟಿಎಫ್ ಡೇವಿಸ್ ಕಪ್ ಸಮಿತಿ ಪರಿಗಣಿಸಿ ಸೆ.14 ಹಾಗೂ 15ರಂದು ನಡೆಯಬೇಕಾಗಿದ್ದ ಪಂದ್ಯವನ್ನು ಮುಂದೂಡಲು ನಿರ್ಧರಿಸಿತ್ತು.

ಸ್ವತಂತ್ರ ನಿಪುಣ ಭದ್ರತಾ ಸಲಹೆಗಾರರು ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು ಸುದೀರ್ಘವಾಗಿ ಪರಿಶೀಲಿಸಿದ ಬಳಿಕ ಡೇವಿಸ್ ಕಪ್ ಸಮಿತಿಯು ಇಸ್ಲಾಮಾಬಾದ್‌ನಲ್ಲಿ ಸೆ.14-15ರಂದು ನಿಗದಿಯಾಗಿದ್ದ ಡೇವಿಸ್ ಕಪ್ ಏಶ್ಯ/ ಒಶಿಯಾನಿಯ ಗ್ರೂಪ್-1 ಪಂದ್ಯವನ್ನು ಮುಂದೂಡುವ ನಿರ್ಧಾರಕ್ಕೆ ಬಂತು ಎಂದು ಐಟಿಎಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News