ಪಾಣೆಮಂಗಳೂರು: 14 ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಆರಂಭ

Update: 2019-09-14 05:15 GMT

ಬಂಟ್ಚಾಳ: ಪಾಣೆಮಂಗಳೂರು ಹೋಬಳಿಯ ನೇತ್ರಾವತಿ ನದಿ ಕಿನಾರೆಯ ಪರಂಬೋಕು ಜಾಗದಲ್ಲಿದ್ದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಗೊಳಪಟ್ಟ ಕಂದಾಯ ಇಲಾಖೆಯ ಸುಮಾರು 2 ಎಕರೆ ಜಾಗದಲ್ಲಿದ್ದ ಸುಮಾರು 14 ಮನೆಗಳನ್ನು ತೆರವುಗೊಳಿಸಲಾಗುತ್ತಿದೆ. ಸಹಾಯಕ ಆಯುಕ್ರ ರವಿಚಂದ್ರ ನಾಯಕ್ ಅವರ ಆದೇಶದ ಮೇರೆಗೆ ಇಂದು ಬೆಳಿಗ್ಗೆ 8.30 ರ ಸುಮಾರಿಗೆ ತಹಶೀಲ್ದಾರ್ ರಶ್ಮಿ ನೇತೃತ್ವದ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನೇತೃತ್ವದ ಪುರಸಭಾ ಅಧಿಕಾರಿಗಳ ತಂಡ ಪೊಲೀಸ್ ಬಂದೋಬಸ್ತೀನಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದೆ.

ಮೂರು ಜೆಸಿಬಿ ಮೂಲಕ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ.

ನೇತ್ರಾವತಿ ನದಿ ಬಳಿಯ ಪರಂಬೋಕು ಸರ್ವೆ ಸಂಖ್ಯೆ 6/3, 9/14ಎ ಜಮೀನು ಪ್ರಾಕೃತಿಕ ವಿಕೋಪದ ಸಂದರ್ಭ ಮುಳುಗಡೆಯಾಗುತ್ತದೆ. ಈ ಜಮೀನು ಜನ ವಸತಿಗೆ ಯೋಗ್ಯವಲ್ಲದ್ದಾಗಿದ್ದು ಕಂದಾಯ ಇಲಾಖೆಗೆ ಸೇರಿದೆ. 2017 ರಿಂದ ಪುರಸಭೆ ಈ ಮನೆಯಲ್ಲಿ ವಾಸ್ತವ್ಯದಲ್ಲಿದ್ದ ಜನರಿಗೆ ಸ್ಥಳಾಂತರಗೊಳ್ಳುವಂತೆ ನೋಟೀಸ್ ನೀಡಲಾಗಿತ್ತು. ಕಳೆದ ಸೆ. 11 ರಂದು ತೆರವಿಗೆ ಅಂತಿಮ ನೋಟೀಸನ್ನು ನೀಡಲಾಗಿತ್ತು. ಆದರೂ ಮನೆಮಂದಿ ಯಾವುದೇ ಸ್ಪಂದನೆ ಹಾಗೂ ಸೂಕ್ತ ದಾಖಲೆ ನೀಡದ ಕಾರಣ ತೆರವು ಕಾರ್ಯಾಚರಣೆ ಕೈಗೊಂಡಿದೆ. ಈ ಮನೆಗಳಲ್ಲಿ ಸ್ಥಳೀಯರು ಯಾರು ವಾಸ್ತವ್ಯ ಇಲ್ಲದೆ ಇರುವುದರಿಂದ ತೆರವಿಗೆ ತೀರ್ಮಾನಿಸಲಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ಭಾರೀ ಸಂಖ್ಯೆಯ ಸಾರ್ವಜನಿಕರು ಹಾಗೂ ಕುತೂಹಲಿಗರು ನೆರೆದಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News