ಕಾರು ಪಲ್ಟಿಯಾಗಿ ಹೊತ್ತಿಕೊಂಡ ಬೆಂಕಿಗೆ ಮೂವರು ಮಕ್ಕಳು ಸಹಿತ ಐವರು ಬಲಿ

Update: 2019-09-14 07:09 GMT

ಹೈದರಾಬಾದ್, ಸೆ.14: ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರು ಉರುಳಿಬಿದ್ದು ಹೊತ್ತಿಕೊಂಡ ಬೆಂಕಿಗೆ ಮೂವರು ಮಕ್ಕಳು ಸಹಿತ ಐವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರನ್ನು ಜಾಹ್ನವಿ, ಕಾಲಾ, ಭಾನು ತೇಜಾ, ಪವನ್ ರಾಮ್ ಹಾಗೂ ಸಾಯಿ ಆಶ್ರಿತಾ ಎಂದು ಗುರುತಿಸಲಾಗಿದೆ. ಕಾರಿನ ಮಾಲಕ ವಿಷ್ಣು ಹೊತ್ತಿಉರಿದ ಕಾರಿನಿಂದ ಬಚಾವಾಗಿದ್ದು, ಪಾಲಾಮನೆರ್ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಶನಿವಾರ ಬೆಳಗ್ಗಿನ ಜಾವ ಚಿತ್ತೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಮಗುಡು ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ತಿರುಪತಿ ನಿವಾಸಿ ವಿಷ್ಣು ತನ್ನ ಕಾರಿನಲ್ಲಿ ಸಹೋದರಿ ಕಾಲಾ ಹಾಗು ಆಕೆಯ ಮಕ್ಕಳನ್ನು ಬೆಂಗಳೂರಿಗೆ ಬಿಟ್ಟುಬರಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ವೇಗವಾಗಿ ಚಲಿಸುತ್ತಿದ್ದ ಕಾರು ಮಮಗುಡು ತಲುಪುತ್ತಲೇ ಹೆದ್ದಾರಿಯಿಂದ ಬದಿಯ ಪೊದೆಗೆ ಉರುಳಿಬಿತ್ತು. ತಕ್ಷಣವೇ ಕಾರಿನ ಇಂಧನ ಟ್ಯಾಂಕಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಕೆಲವು ಸ್ಥಳೀಯರು ಇದನ್ನು ಗಮನಿಸಿ ಸಹಾಯಕ್ಕೆ ಧಾವಿಸಿ ವಿಷ್ಣು ಅವರನ್ನು ಕಾರಿನಿಂದ ಹೊರ ತರಲು ಯಶಸ್ವಿಯಾದರು. ಆದರೆ ಉಳಿದವರು ಸಂಪೂರ್ಣ ಸುಟ್ಟು ಕರಕಲಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News