ವಿಟ್ಲದಲ್ಲಿ ಪಾಲನೆಯಾಗುತ್ತಿಲ್ಲ ಸಂಚಾರ ನಿಯಮ !

Update: 2019-09-14 10:17 GMT

ವಿಟ್ಲ, ಸೆ. 13: ರಸ್ತೆ ಸುರಕ್ಷತಾ ಸಪ್ತಾಹ, ಜಾಗೃತಿ ಕಾರ್ಯಕ್ರಮಗಳ ಬಳಿಕ ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದರೂ ವಿಟ್ಲ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಇಂದಿನವರೆಗೂ ಪರಿಹಾರ ವಾಗಿಲ್ಲ. ಜಿಲ್ಲಾಧಿಕಾರಿ ಅವರ ಆದೇಶವಿದ್ದರೂ, ನಾಲಫಲಕಗಳನ್ನು ಅಳವಡಿಸಿದರೂ ಇಲ್ಲಿ ಸಂಚಾರ ನಿಯಮವು ಸ್ವಲ್ಪವೂ ಪಾಲನೆಯಾಗುತ್ತಿಲ್ಲ. ಇದರಿಂದ ಪ್ರಮುಖ ಮಾರ್ಗಗಳನ್ನು ದಾಟಲು ವಾಹನ ಸವಾರರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಈ ಹಿಂದೆ ವಿಟ್ಲ ರಸ್ತೆಗಳು ತುಂಬ ಕಿರಿದಾಗಿತ್ತು. ಇದರಿಂದ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿತ್ತು. ಬಳಿಕ ರಸ್ತೆ ಬದಿ ಅಂಗಡಿ ಮಾಲಕರ ಸಹಕಾರದಿಂದ ರಸ್ತೆ ಒಂದಿಷ್ಟು ಅಗಲವಾಯಿತು. ಆದರೂ, ಅಗಲ ಕಿರಿದಾದ ರಸ್ತೆಯಲ್ಲಿ ಒಂದು ಘನ ವಾಹನ ಇನ್ನೊಂದು ಸಣ್ಣ ವಾಹನಕ್ಕೆ ಸಂಚರಿಸಲು ಅವಕಾಶ ಮಾಡಿಕೊಡುವುದರಲ್ಲಿ ಸ್ವಲ್ಪ ಎಡವಿದರೂ ಕನಿಷ್ಠ ಅರ್ಧ ಗಂಟೆ ಟ್ರಾಫಿಕ್ ಜಾಮ್ ಉಂಟಾಗಿ ಮೈಲುಗಟ್ಟಲೆ ಉದ್ದದ ವಾಹನಗಳ ಸಾಲು ನಿರ್ಮಾಣವಾಗುತ್ತವೆ.
ಸಂಚಾರ ನಿಯಮ ಪಾಲನೆ ಆಗುತ್ತಿಲ್ಲ

ಪಟ್ಟಣದ ಹಲವು ಭಾಗಗಳಲ್ಲಿ ಸಂಚಾರ ನಿಯಮವನ್ನು ಕೆಲ ಆಟೊ ಚಾಲಕರು, ಖಾಸಗಿ ಬಸ್ ಚಾಲಕರು ಗಾಳಿಗೆ ತೂರಿದ್ದಾರೆ. ನಿಲುಗಡೆಗೆ ನಿಷೇಧಿಸಲಾಗಿದೆ ಎಂಬ ನಾಮಫಲಕ ಅಳವಡಿಸಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ರಸ್ತೆಗಳ ಮುಂಭಾಗದಲ್ಲೇ ಆಟೊ, ಖಾಸಗಿ ಬಸ್, ವಾಹನಗಳು ಎಗ್ಗಿಲ್ಲದೆ ನಿಲುಗಡೆ ಮಾಡುತ್ತಿವೆ. ಇದರಿಂದ ಪಾದಚಾರಿಗಳು ಕೂಡ ನಡೆದಾಡಲು ಪರದಾಡಬೇಕಾಗುತ್ತದೆ. ಪೊಲೀಸ್ ಬ್ಯಾರಿಕೇಡ್‌ಗಳು ನಾಪತ್ತೆಯಾಗಿವೆ.
 
ವಿಟ್ಲಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ವಿಟ್ಲದ ನಾಲ್ಕು ಮಾರ್ಗದಲ್ಲಿ ಪೊಲೀಸ್ ನಿಯೋಜಿಸಿ ಸಂಚಾರ ಸುಗಮಗೊಳಿಸುವ ಬಗ್ಗೆ ಹೇಳಿದ್ದರು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆ ಆರಂಭಗೊಂಡ ನಂತರ ಇಬ್ಬರು ಟ್ರಾಫಿಕ್ ಪೊಲೀಸರನ್ನು ನಿಯೋಜಿಸುವ ಬಗ್ಗೆ ಭರವಸೆ ನೀಡಿದ್ದು, ಯಾವುದೇ ಕಾರ್ಯ ನಡೆದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಎಲ್ಲೆಲ್ಲಿ ಅಕ್ರಮ ನಿಲುಗಡೆ?

ವಿಟ್ಲ-ಪುತ್ತೂರು ರಸ್ತೆಯ ಬಲಬದಿಯಲ್ಲಿ, ವಿಟ್ಲ-ಸಾಲೆತ್ತೂರು ರಸ್ತೆಯ ಕ್ಲಿನಿಕ್‌ ಆಸ್ಪತ್ರೆ ತನಕ, ವಿಟ್ಲ-ಮಂಗಳೂರು ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನದ ಹಿಂಬದಿಯವರೆಗೆ ಹಾಗೂ ಕಾಸರಗೋಡು ರಸ್ತೆಯ ಅಂಗಡಿಗಳವರೆಗೆ ವಾಹನಗಳು ಅಕ್ರಮ ನಿಲುಗಡೆಯಾಗುತ್ತವೆ ಎಂಬುವುದು ಸಾರ್ವಜನಿಕರ ಆರೋಪ. ವಿಟ್ಲ-ಪುತ್ತೂರು ರಸ್ತೆಯ ಜೈನ ಬಸದಿ ಬಳಿ ಫುಟ್‌ಪಾತ್‌ನಲ್ಲೇ ವಾಹನ ಪಾರ್ಕಿಂಗ್ ಮಾಡುವುದರಿಂದ ಶಾಲಾ ಮಕ್ಕಳು ಸೇರಿದಂತೆ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಡಕುಂಟಾಗುತ್ತದೆ.

ಪರಿಹಾರವೇನು?
ವಿಟ್ಲ-ಮಂಗಳೂರು ರಸ್ತೆಯಲ್ಲಿ ನಾಲ್ಕು ಮಾರ್ಗ ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ಲಯನ್ಸ್ ಬಸ್ ನಿಲ್ದಾಣವಿದ್ದು, ಮಂಗಳೂರಿಗೆ ತೆರಳುವ ಮತ್ತು ಮಂಗಳೂರು ಕಡೆಯಿಂದ ಬರುವ ಎಲ್ಲ್ಲ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಲು, ಇಳಿಸಲು ಇಲ್ಲಿ ಅವಕಾಶ ಕಲ್ಪಿಸಬೇಕು. ಅಂತರ್‌ರಾಜ್ಯ ಹಾಗೂ ಖಾಸಗಿ ಬಸ್ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಪುತ್ತೂರು ರಸ್ತೆಯಲ್ಲಿರುವ ಸ್ಟೈಲ್ ಪಾರ್ಕ್ ಜವುಳಿ ಅಂಗಡಿಯ ಬಳಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಹಳೆ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ನಿಲ್ಲಲು 15 ನಿಮಿಷಗಳ ಕಾಲಾವಕಾಶ, ಹಳೆ ಬಸ್ ನಿಲ್ದಾಣದಲ್ಲಿ ಆಟೊ ರಿಕ್ಷಾಗಳಿಗೆ ಸಾಲಿನಲ್ಲಿ ನಿಲ್ಲಲು ಅವಕಾಶ. ಐಟಿಐ, ಪೊಲೀಸ್ ವಸತಿಗೃಹವಿರುವ ರಸ್ತೆಯಲ್ಲಿ ಸಂತೆಯ ದಿನ ಅವಕಾಶ ನೀಡಬಾರದು ಎಂದು ಸವಾರರೊಬ್ಬರು ಮಾಹಿತಿ ನೀಡಿದ್ದಾರೆ.

ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಬಸ್ ಚಾಲಕರ ಸಭೆ ಕರೆದು ಮಾತುಕತೆ ನಡೆಸಬೇಕು. ಅಲ್ಲಲ್ಲಿ ಖಾಸಗಿ, ಸರಕಾರಿ ಬಸ್‌ಗಳನ್ನು ನಿಲ್ಲಿಸಿ ಜನ ಹತ್ತಿಸುವ ವಿರುದ್ಧ ಕ್ರಮ ಕೈಗೊಂಡು ಪ್ರಮುಖ ಸ್ಥಳದಲ್ಲಿ ಬಸ್ ತಂಗುದಾಣ ಮಾಡಬೇಕು. ವಿಟ್ಲ ಪೇಟೆಯಲ್ಲಿ ಸಂಚಾರ ನಿಭಾಯಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಯನ್ನು ನಿವಾರಣೆಯಾಗಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ವಿಟ್ಲ ಪೇಟೆಯ ಆಡಳಿತ, ಪೊಲೀಸ್ ಮತ್ತು ಜನಸಾಮಾನ್ಯರಿಗೆ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ತನ್ನ ಆಡಳಿತಾವಧಿಯಲ್ಲಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಸಾರ್ವಜನಿಕರ, ವಾಹನ ಸವಾರರ ಅಸಹಕಾರದಿಂದ ಸಾಧ್ಯವಾಗುತ್ತಿಲ್ಲ. ಅದಲ್ಲದೆ, ಪೊಲೀಸರಿಗೆ ಠಾಣೆ ಬಿಟ್ಟು ಬರಲು ಸಮಯವಿಲ್ಲ. ಗೃಹ ರಕ್ಷಕದಳದ ಸಿಬ್ಬಂದಿಯನ್ನೇ ಬಳಸಿಕೊಂಡು ಹಲವು ಕಡೆ ಪೊಲೀಸ್ ಕೆಲಸ ನಿರ್ವಹಿಸಲಾಗುತ್ತಿದೆ.

-ಅರುಣ್ ವಿಟ್ಲ, ಮಾಜಿ ಅಧ್ಯಕ್ಷ, ವಿಟ್ಲ ಪಟ್ಟಣ ಪಂಚಾಯತ್

ವಿಟ್ಲ ಪೇಟೆಯ ಸುಗಮ ಸಂಚಾರಕ್ಕಾಗಿ ಪಟ್ಟಣ ಪಂಚಾಯತ್ ಪೊಲೀಸರ ಸಹಕಾರದಿಂದ ಸಾಕಷ್ಟು ಪ್ರಯತ್ನ ಮಾಡಿದೆ. ಪೀಕ್ ಸಮಯದಲ್ಲಿ ನಾಲ್ಕು ಮಾರ್ಗದಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ ಈ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಬಸ್, ಕಾರು ಹಾಗೂ ಆಟೊ ಚಾಲಕರ ಸಭೆ ಕರೆಯಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯ.

-ದಮಯಂತಿ, ಅಧ್ಯಕ್ಷೆ, ವಿಟ್ಲ ಪಟ್ಟಣ ಪಂಚಾಯತ್

ಸುಗಮ ಸಂಚಾರಕ್ಕಾಗಿ ಇಲ್ಲಿನ ವರ್ತಕರು ಸ್ವಇಚ್ಛೆಯಿಂದ ತಮ್ಮ ಜಾಗವನ್ನು ರಸ್ತೆಗಾಗಿ ಬಿಟ್ಟು ಕೊಟ್ಟಿದ್ದಾರೆ. ಇದರಿಂದ ರಸ್ತೆ ಅಗಲೀಕರಣವೂ ಆಗಿದೆ. ಆದರೆ, ಆ ಜಾಗಗಳಲ್ಲಿ ಅಕ್ರಮವಾಗಿ ವಾಹನ ಪಾರ್ಕಿಂಗ್ ಮಾಡುವುದೂ ವಾಹನದಟ್ಟಣೆಗೆ ಕಾರಣವಾಗಿದ್ದು, ಪಾದಚಾರಿಗೆ ನಡೆದಾಡಲು ತೊಂದರೆಯಾಗುತ್ತಿವೆ. ಪೊಲೀಸರು ಅಕ್ರಮ ವಾಹನ ಪಾರ್ಕಿಂಗ್‌ಗೆ ಕಡಿವಾಣ ಹಾಕಬೇಕಾಗಿದೆ.
-ಅಬೂಬಕರ್ ಅನಿಲಕಟ್ಟೆ, ಸ್ಥಳೀಯರು

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News