ಉಡುಪಿ: 24 ಗಂಟೆಯೊಳಗೆ 22 ಲಕ್ಷ ರೂ. ಕಳವು ಪ್ರಕರಣ ಬೇಧಿಸಿದ ಪೊಲೀಸರು- ಇಬ್ಬರ ಬಂಧನ

Update: 2019-09-14 12:24 GMT

ಉಡುಪಿ, ಸೆ.14: ಒಳಕಾಡು ಹರಿಶ್ಚಂದ್ರ ಮಾರ್ಗದಲ್ಲಿ ಸೆ.12ರಂದು ಹಾಡು ಹಗಲೇ ಮನೆಯೊಳಗೆ ನುಗ್ಗಿ 22 ಲಕ್ಷ ರೂ. ನಗದು ಕಳವುಗೈದ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಯೊಳಗೆ ಬೇಧಿಸುವಲ್ಲಿ ಯಶಸ್ವಿಯಾಗಿರುವ ಉಡುಪಿ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ನಿವಾಸಿಗಳಾದ ಅತುಲ್ ಮಹಾದೇವ್ ಬಾಗ್ನೆ (24) ಹಾಗೂ ಸಂದೀಪ್ ಚಂದ್ರಕಾಂತ್ ಶಿಂಧೆ (25) ಬಂಧಿತ ಆರೋಪಿಗಳು.

ಒಳಕಾಡು ಹರಿಶ್ಚಂದ್ರ ಮಾರ್ಗದ ಛತ್ರಪತಿ ಶಿವಾಜಿ ರೋಡ್ ನಿವಾಸಿ ಸುನಂದ ಮಾಣಿಕ್ಯ ಪಾಟೀಲ್ ಎಂಬವರು ಮಧ್ಯಾಹ್ನ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ ಸುನಂದರ ಗಂಡನ ಸಂಬಂಧಿಯಾದ ಆರೋಪಿಗಳಿಬ್ಬರು ಸೇರಿ ಮನೆಯ ಎದುರಿನ ಬೀಗವನ್ನು ಮುರಿದು ಒಳನುಗ್ಗಿ ಅಡುಗೆ ಮನೆಯ ಡಬ್ಬಗಳಲ್ಲಿ ಇರಿಸಿದ್ದ 22 ಲಕ್ಷ ರೂ. ಮತ್ತು ಬೆಳ್ಳಿಯನ್ನು ಕಳವು ಮಾಡಿದ್ದರು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಂತೆ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ ಮಾರ್ಗದರ್ಶನದಲ್ಲಿ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಸಿಬ್ಬಂದಿ, ಬೈಂದೂರು ಪೊಲೀಸ್ ಠಾಣಾ ಎಸ್ಸೈ ಮತ್ತು ಸಿಬ್ಬಂದಿಯವರೊಂದಿಗೆ ಅತುಲ್ ಮಹಾ ದೇವ್ ಬಾಗ್ನೆನನ್ನು ಗೋವಾದ ಮಡಗಾಂವ್ ರೈಲ್ವೆ ನಿಲ್ಡಾಣದಲ್ಲಿ ಆರ್‌ಪಿಎಫ್ ಇನ್ಸ್‌ಪೆಕ್ಟರ್ ರಣೀತ್ ಮರಾಂಡಿ ಮತ್ತು ಕೊಂಕಣ ರೈಲ್ವೆ ಪೊಲೀಸ್ ಇನ್ಸ್‌ಸ್ಪೆಕ್ಟರ್ ಶೈಲೇಶ್ ನಾರ್ವೇಕರ್ವರ ಸಹಾಯದಿಂದ ಅದೇ ದಿನ ರಾತ್ರಿ ಬಂಧಿಸಿದರು.

ಇನ್ನೋರ್ವ ಆರೋಪಿ ಸಂದೀಪ್ ಚಂದ್ರಕಾಂತ್ ಶಿಂಧೆಯನ್ನು ಪೊಲೀಸರು ಸೆ.13ರಂದು ಸಂಜೆ ಬೈಂದೂರು ರೈಲ್ವೆ ನಿಲ್ಡಾಣದಲ್ಲಿ ಬಂಧಿಸಿದರು. ಬಂಧಿತ ರಿಂದ 21,84,500ರೂ. ನಗದು ಹಾಗೂ ಅರ್ಧ ಕೆ.ಜಿ. ಬೆಳ್ಳಿಯನ್ನು ವಶಪಡಿಸಿ ಕೊಳ್ಳಲಾಗಿದೆ. ಬಂಧಿತರನ್ನು ಸೆ.14ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣ ದಾಖಲಾದ 24ಗಂಟೆಯೊಳಗೆ ಬೇಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಗದು ಪಾರಿತೋಷಕವನ್ನು ನೀಡಿ ಗೌರವಿಸಿದ್ದಾರೆ.

ಸಾಂಗ್ಲಿಯಲ್ಲೇ ಕೃತ್ಯಕ್ಕೆ ಯೋಜನೆ

ಪ್ರಮುಖ ಆರೋಪಿ ಅತುಲ್ ಮಹಾದೇವ್ ಬಾಗ್ನೆ ಸುಮಾರು 4-5 ತಿಂಗಳ ಹಿಂದೆ 2 ತಿಂಗಳುಗಳ ಕಾಲ ಸುನಂದ ಮಾಣಿಕ್ಯ ಪಾಟೀಲ್ ಅವರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ನಂತರ ಆತನ ಅಪ್ರಾಮಾಣಿಕತನಕ್ಕೆ ಕೆಲಸದಿಂದ ತೆಗೆದು ಹಾಕಲಾಗಿತ್ತು.

ಬಂಧಿತ ಇಬ್ಬರು ಆರೋಪಿಗಳು ಸಾಂಗ್ಲಿಯಲ್ಲಿ ಸ್ನೇಹಿತರಾಗಿದ್ದು, ಸಾಂಗ್ಲಿಯಲ್ಲಿಯೇ ಈ ಬಗ್ಗೆ ಯೋಜನೆ ನಡೆಸಿ, ಎರಡು ದಿನದ ಹಿಂದೆ ಉಡುಪಿಗೆ ಆಗಮಿಸಿ, ರೂಂ ಮಾಡಿ ತಂಗಿದ್ದರು. ಸಂದರ್ಭ ನೋಡಿಕೊಂಡು ಮನೆಗೆ ನುಗ್ಗಿ ಈ ಕೃತ್ಯ ಎಸಗಿ ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News