ಉರ್ವಾ ಬಳಿ ಕ್ರೀಡಾ ಸಂಕೀರ್ಣ: ಶಾಸಕ ವೇದವ್ಯಾಸ ಕಾಮತ್

Update: 2019-09-14 13:07 GMT

ಮಂಗಳೂರು, ಸೆ.14: ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಧನೆಯನ್ನು ಮೆರೆಯಲು ಪೂರಕವಾಗುವಂತೆ ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ಕ್ರೀಡಾ ಸಂಕೀರ್ಣ ತಲೆ ಎತ್ತಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಇಂದು ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಕಾಂಪ್ಲೆಕ್ಸ್ 22.50 ಕೋಟಿರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಇದರಲ್ಲಿ ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್ ಹಾಗೂ ಸ್ವಿಮ್ಮಿಂಗ್ ಪೂಲ್ ಕೂಡಾ ಇರಲಿದೆ. ಈ ಕಾಂಪ್ಲೆಕ್ಸ್ ಕಾಮಗಾರಿಯ ಪ್ರಕ್ರಿಯೆ ಆರಂಭವಾಗಿದ್ದು, ತನ್ನ ಶಾಸಕ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಕ್ರೀಡಾ ಅಧಿಕಾರಿಯವರು ಸಲ್ಲಿಸಿದ ಮನವಿಯ ಮೇರೆಗೆ ಮಂಗಳಾ ಕ್ರೀಡಾಂಗಣದ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗಿದೆ. ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್‌ಗೆ 3.35 ಕೋಟಿ ರೂ.ಗಳನ್ನು ಮಂಜೂ ರಾತಿ ಒದಗಿಸಿದ್ದಾರೆ. 16 ಲಕ್ಷ ರೂ. ವೆಚ್ಚದಲ್ಲಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ರೂಫ್ ಸೇರಿದಂತೆ ಮಂಗಳಾ ಕ್ರೀಡಾಂಗಣ ಸಂಪೂರ್ಣ ದುರಸ್ತಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ನಗರದ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗಷ್ಟೇ ಸೀಮಿತ ಗೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ಕ್ರೀಡಾ ಪ್ರತಿಭೆಗಳು ಹೊರಬರುತ್ತಿದ್ದಾರೆ. ನಗರದಿಂದಲೂ ಕ್ರೀಡಾ ಪ್ರತಿಭೆ ಗಳು ಹೊರಬರಬೇಕಾಗಿದೆ ಎಂದರು.

ಸಾಧಕರಿಗೆ ಸನ್ಮಾನ

ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ಪ್ರೌಢಶಾಲೆ ಹರೇಕಳದ ಶಿಕ್ಷಕ ತ್ಯಾಗಂ ಹರೇಕಳ, ವಿಟ್ಲದ ಬಾಲಿಕಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಮಲ್ಲಿಕಾ ಹೆಗ್ಡೆ ಹಾಗೂ ಮಂಗಳಾ ಕ್ರೀಡಾಂಗಣದ ನಿವೃತ್ತ ಕಚೇರಿ ಅಟೆಂಡರ್ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯೆ ಧನಲಕ್ಷ್ಮಿ ಗಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ  ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಗಿರೀಶ್ ಶೆಟ್ಟಿ, ಕೊಡೆತ್ತೂರು ಬರ್ಕೆ ಫ್ರೆಂಡ್ಸ್‌ನ ಪ್ರೇಮ್‌ರಾಜ್ ಶೆಟ್ಟಿ, ರತನ್ ಶೆಟ್ಟಿ, ಸುನಿಲ್ ಶೆಟ್ಟಿ, ವಿಷ್ಣು ನಾರಾಯಣ್ ಹೆಬ್ಬಾರ್, ಹರೀಶ್ ರೈ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಕ್ರೀಡಾಧಿಕಾರಿ ಲಿಲ್ಲಿ ಪಾಯಸ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News