ದಸರಾ ಕ್ರೀಡಾಕೂಟದಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ

Update: 2019-09-14 13:14 GMT

ಬೆಳ್ತಂಗಡಿ : ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಸರಾ ಕ್ರೀಡಾಕೂಟದೊಂದಿಗೆ ಗ್ರಾಮೀಣ ಕ್ರೀಡಾಕೂಟ ವನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾವಿಸಲಾಗುವುದು ಎಂದು ಜಿಪಂ ಸದಸ್ಯ ಕೊರಗಪ್ಪ ನಾಯ್ಕ್ ಹೇಳಿದರು.

ಅವರು ಶನಿವಾರ ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ ದ.ಕ.ಜಿ.ಪಂ. ಬೆಳ್ತಂಗಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ, ಯುವಜನ ಒಕ್ಕೂಟ ಬೆಳ್ತಂಗಡಿ, ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2019-20 ನ್ನು ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ತಾಲೂಕಿನಲ್ಲಿ ಪ್ರವಾಹದ ಹಿನ್ನಲೆಯಲ್ಲಿ ಸಂಕಷ್ಟಗಳಿದ್ದರೂ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಸಿಗಲಿ ಎಂದು ಶಾಸಕರು ಉತ್ತಮವಾಗಿ ಕ್ರೀಡಾಕೂಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದ ಅವರು, ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತಿಲ್ಲ. ಅದರ ದುರಸ್ತಿಗೆ 23 ಲಕ್ಷ ರೂ. ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ತಾಲೂಕಿನಲ್ಲಿ 400 ಮೀಟರ್ ಟ್ರ್ಯಾಕ್ ಇರುವ ಕ್ರೀಡಾಂಗಣವಿಲ್ಲ. ತಾಲೂಕಿನಲ್ಲಿರುವ ಸರಕಾರಿ ಶಾಲೆಗಳಲ್ಲಿ 8 ಎಕರೆಗಿಂತ ಅಧಿಕ ಜಾಗವಿದ್ದರೆ ಅಲ್ಲಿ ಕ್ರೀಡಾಂಗಣವನ್ನು ನಿರ್ಮಿಸುವ ಕುರಿತು ಚಿಂತನೆಗಳನ್ನು ನಡೆಸಲಾಗುವುದು ಎಂದರು.

ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಸೌಮ್ಯಲತಾ ಜಯಂತ ಗೌಡ, ಮಮತಾ ಶೆಟ್ಟಿ, ತಾಪಂ ಸದಸ್ಯರಾದ ಶಶಿಧರ ಎಂ. ಕಲ್ಮಂಜ, ಪ್ರವೀಣ ಗೌಡ, ಬೆಳ್ತಂಗಡಿ ಪಟ್ಟಣ ಪಂ. ಸದಸ್ಯ ಜನಾರ್ದನ, ಉಜಿರೆ ಎಸ್‍ಡಿಎಂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಎಚ್., ಮುಂಡಾಜೆ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್  ಕ್ಲಬ್ ಸಂಚಾಲಕ ನಾಮದೇವ ರಾವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಯುವರಾಜ್ ಅನಾರ್, ನಿಸರ್ಗ ಯುವಜನದ ಅಧ್ಯಕ್ಷ ಪುನೀತ್ ಕುಮಾರ್ ಉಪಸ್ಥಿತರಿದ್ದರು. 

 ತಾಲೂಕು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಬಾಕರ ನಾರಾವಿ ಸ್ವಾಗತಿಸಿದರು. ಬೆಳ್ತಂಗಡಿ ಯುವಜನ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.  

ಈ ಬಾರಿಯ ದಸರಾ ಕ್ರೀಡಾ ಕೂಟದಲ್ಲಿ ಯುವಕ ಹಾಗೂ ಯುವತಿ ಮಂಡಲಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂಬ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವುದಕ್ಕಾಗಿ ಶಾಸಕ ಹರೀಶ ಪೂಂಜ ಅವರು ಪುರುಷರ 5 ವಿಭಾಗದ ಕ್ರೀಡೆಗಳಿಗೆ ಹಾಗೂ ಮಹಿಳೆಯ 4 ವಿಭಾಗದ ಕ್ರೀಡೆಗಳಿಗೆ ತಲಾ 15 ಸಾವಿರದಂತೆ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಪ್ರಥಮ ಸ್ಥಾನ ಪಡೆದ ತಂಡಕ್ಕೆ 6 ಸಾವಿರ, ದ್ವಿತೀಯ ತಂಡಕ್ಕೆ ನಾಲ್ಕು ಸಾವಿರ, ತೃತೀಯ ಮತ್ತು ಚತುರ್ಥ ತಂಡಕ್ಕೆ ತಲಾ ಎರಡೂವರೆ ಸಾವಿರ ರೂ. ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News