ವಿದ್ಯಾರ್ಥಿಗಳ ವಿವಿಧ ಪ್ರಯೋಗಗಳಿಗೆ ಸಾಕ್ಷಿಯಾದ ‘ಬ್ರೈನ್ ಕ್ವೆಸ್ಟ್’

Update: 2019-09-14 13:24 GMT

ಉಡುಪಿ, ಸೆ.14: ಉಡುಪಿಯ ಇ-ಸ್ಕೂಲ್ ವತಿಯಿಂದ ಬ್ರೈನ್ ಕ್ವೆಸ್ಟ್- 2019 ವಿಜ್ಞಾನ ಮೇಳವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಈ ಮೇಳದಲ್ಲಿ ಪಾಲ್ಗೊಂಡ ಜಿಲ್ಲೆಯ ಆರು ಪ್ರೌಢಶಾಲೆಗಳ 61 ವಿದ್ಯಾರ್ಥಿ ಗಳು ಮಣ್ಣಿನಲ್ಲಿರುವ ತೇವಾಂಶ ಪತ್ತೆ, ನಮ್ಮ ಸುತ್ತಲಿನ ನೀರಿನ ಪರಿಶುದ್ಧತೆ ಬಗ್ಗೆ ಪರೀಕ್ಷೆ, ಹಸಿರು ಮನೆಯ ಪರಿಣಾಮ ಹಾಗೂ ಬಕೆಟ್ ಕಸ ವಿಲೇವಾರಿ ಕುರಿತು ನಡೆಸಿರುವ ಪ್ರಯೋಗಗಳ ಮಾದರಿಯನ್ನು ಪ್ರದರ್ಶಿಸಿದರು.

ಉಡುಪಿ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಭಿಷೇಕ್, ಅಕ್ಷಯ್ ಸುಮೇದ್ ತಯಾರಿಸಿರುವ ಮಣ್ಣಿನಲ್ಲಿರುವ ತೇವಾಂಶದ ಪರೀಕ್ಷೆ ಮಾಡುವ ಮೀಟರ್ ಬಗ್ಗೆ ವಿವರ ನೀಡಿದರು. ಈ ಮೀಟರ್‌ನಲ್ಲಿರುವ ಸೆನ್ಸಾರ್ ಮೂಲಕ ಕಂಪ್ಯೂಟರ್‌ನಲ್ಲಿ ಆಳವಡಿಸಲಾದ ಸಾಪ್ಟ್‌ವೇರ್‌ನಿಂದ ಮಣ್ಣಿನಲ್ಲಿ ಎಷ್ಟು ಪ್ರಮಾಣದಲ್ಲಿ ತೇವಾಂಶ ಇದೆ ಎಂಬುದನ್ನು ಕಂಡುಕೊಳ್ಳ ಬಹುದಾಗಿದೆ.

ನಮ್ಮ ಪರಿಸರದಲ್ಲಿರುವ ಕುಡಿಯುವ ನೀರು ಶುದ್ಧವೇ ಎಂಬುದನ್ನು ಪರೀಕ್ಷಿಸುವ ಪ್ರಯೋಗದ ಬಗ್ಗೆ ಕಡಿಯಾಳಿ ಯು.ಕಮಲಾ ಬಾ ಸ್ಕೂಲಿನ ವಿದ್ಯಾರ್ಥಿಗಳಾದ ಸಚಿನ್ ಹಾಗೂ ಸಂತೋಷ್ ವಿವರ ನೀಡಿದರು. ಅದೇ ಶಾಲೆಯ ವಿದ್ಯಾರ್ಥಿಗಳಾದ ವಿನಾಯಕ ಶೇಟ್, ಪ್ರಶಾಂತ್ ಹಸಿರು ಮನೆ ಅನಿಲಗಳಿಂದ ಭೂಮಿ ಹಾಗೂ ವಾತಾವರಣದಲ್ಲಿ ಆಗುವ ಬಿಸಿಯ ಕುರಿತು ಮಾಹಿತಿ ನೀಡಿದರು.

ಮನೆಯಲ್ಲಿ ಸೃಷ್ಠಿಯಾಗುವ ಹಸಿ ಕಸಗಳನ್ನು ಸಣ್ಣ ಬಕೆಟ್ ಮೂಲಕ ವಿಲೇ ವಾರಿ ಮಾಡುವ ಮಾದರಿಯನ್ನು ಪೆರಂಪಳ್ಳಿ ಟ್ರಿನಿಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಾನಿಯಾ, ಅಧಿಯಾ, ಹರ್ಷ ಪ್ರದರ್ಶಿಸಿದರು. ಹಿರಿಯಡ್ಕ ಗ್ರೀನ್‌ಪಾರ್ಕ್ ಶಾಲೆಯ ವಿದ್ಯಾರ್ಥಿಗಳು, ತಾವೇ ಮಾಡಿರುವ ಪ್ರಯೋಗದಿಂದ ವಿವಿಧ ರೀತಿಯ ರಾಸಾಯನಿಕ ಮಿಶ್ರಣದಿಂದ ನೀರು ತನ್ನ ಬಣ್ಣವನ್ನು ಹೇಗೆ ಬದಲಾಯಿಸು್ತದೆ ಎಂಬುದರ ವಿವರಣೆ ನೀಡಿದರು.

ಅನಂತೇಶ್ವರ ಸ್ಕೂಲಿನ ವಿದ್ಯಾರ್ಥಿಗಳಾದ ಗುರುರಾಜ್, ನಾಗೇಂದ್ರ, ಪವನಜ್ ರಚಿಸಿರುವ ಚಿತ್ರ ಕಲಾಕೃತಿಯನ್ನು ಪ್ರದರ್ಶಿಸಲಾಗಿತ್ತು. ಅದೇ ರೀತಿ ವಿವಿಧ ಶಾಲೆಯ ಮಕ್ಕಳು ತಯಾರಿಸಿದ ಸೋಲಾರ್ ವಾಹನ ಸೇರಿದಂತೆ ವಿವಿಧ ವೈಜ್ಞಾನಿಕ ಮಾದರಿಗಳು ಗಮನ ಸೆಳೆದವು.

ಇ- ಸ್ಕೂಲ್‌ನ ನಿರ್ದೇಶಕಿಯಾಗಿರುವ ಪೂರ್ಣಿಮಾ ಕಾಮತ್ ನೇತೃತ್ವದಲ್ಲಿ ನಡೆದ ಈ ಮೇಳದಲ್ಲಿ ಮಣಿಪಾಲ ಎಂಐಟಿಯ ಪ್ರೊಫೆಸರ್ ನಾರಾಯಣ ಶೆಣೈ ಹಾಗೂ ನಿವೃತ್ತ ತಂತ್ರಜ್ಞ ಥೋಮಸ್ ತೀರ್ಪುಗಾರರಾಗಿ ಮಕ್ಕಳ ಪ್ರಯೋಗ ಗಳನ್ನು ವೀಕ್ಷಿಸಿದರು. ಪ್ರಯೋಗದಲ್ಲಿರುವ ಲೋಪದೋಷ ಹಾಗೂ ಮುಂದೆ ಯಾವ ರೀತಿ ಅಭಿವೃದ್ಧಿ ಪಡಿಸಬಹುದು ಎಂಬುದನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಳೆದ 15ವರ್ಷ ಗಳಿಂದ ಇ ಸ್ಕೂಲ್‌ನ ಪೂರ್ಣಿಮಾ ಕಾಮತ್ ಅಮೆರಿಕಾದಿಂದ ಬಂದು ಪ್ರತಿವರ್ಷ ನಡೆಸುತ್ತಿದ್ದ ‘ಬ್ರೈನ್ ಕ್ವೆಸ್ಟ್’ ವಿಜ್ಞಾನ ಮೇಳವನ್ನು ಕೊನೆಗೊಳಿಸಿದ್ದಾರೆ.

‘ಪ್ರತಿವರ್ಷ ರಜೆ ಪಡೆದುಕೊಂಡು ಭಾರತಕ್ಕೆ ಆಗಮಿಸಿ ಬ್ರೈನ್‌ಕ್ವೆಸ್ಟ್ ನಡೆಸು ತ್ತಿದ್ದೆ. ಇನ್ನು ಮುಂದೆ ಕಷ್ಟ ಆಗಲಿರುವುದರಿಂದ ಅದನ್ನು ಈ ವರ್ಷ ಕೊನೆಗೆ ಗೊಳಿಸುತ್ತಿದ್ದೇನೆ. ಇದು ಕೊನೆಯ ಬ್ರೈನ್‌ಕ್ವೆಸ್ಟ್ ಆಗಿದ್ದು, ಮುಂದಿನ ವರ್ಷದಿಂದ ನಡೆಸುವುದಿಲ್ಲ’ ಎಂದು ಪೂರ್ಣಿಮಾ ಕಾಮತ್ ತಿಳಿಸಿದರು.

ಆರಂಭದಲ್ಲಿ ಎರಡು ದಿನಗಳ ಕಾಲ ನಡೆಸುತ್ತಿದ್ದ ಬ್ರೈನ್ ಕ್ವೆಸ್ಟ್‌ಗೆ 3-4ಲಕ್ಷ ರೂ. ವೆಚ್ಚವಾಗುತ್ತಿತ್ತು. ಇದೀಗ ಅದನ್ನು ಒಂದು ದಿನಕ್ಕೆ ಸೀಮಿತಗೊಳಿಸ ಲಾಗಿತ್ತು. ಕೆಲವೊಂದು ಸಮಸ್ಯೆಯಿಂದ ಈ ಮೇಳವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಬಹುತೇಕ ಮಕ್ಕಳು ವಿಜ್ಞಾನದ ಪ್ರಯೋಗಗಳನ್ನು ಅರಿತುಕೊಂಡಿದ್ದಾರೆ. ಅಲ್ಲದೆ ಯೂ ಟ್ಯೂಬ್ ಮೂಲಕ ಕೂಡ ಕಲಿಯುತ್ತಿ ದ್ದಾರೆ. ಆದುದರಿಂದ ಇದರ ಅವಶ್ಯಕತೆ ಇರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News