ಮಂಗಳೂರು ಮೂಲದ ಬೋಟು ಮುಳುಗಡೆ: 9 ಮಂದಿ ಮೀನುಗಾರರ ರಕ್ಷಣೆ

Update: 2019-09-14 14:42 GMT

ಮಂಗಳೂರು, ಸೆ.14: ಮಂಗಳೂರು ಹಳೆ ಬಂದರಿನ ಮೂಲಕ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್‌ಬೋಟ್‌ವೊಂದು ಕಾಪು ಸಮೀಪ ಮುಳುಗಡೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೋಟ್‌ನಲ್ಲಿದ್ದ 9 ಮಂದಿ ಮೀನುಗಾರರನ್ನು ಇತರ ಬೋಟ್‌ನವರು ರಕ್ಷಣೆ ಮಾಡಿದ್ದಾರೆ.

ಮಂಗಳೂರು ನಗರದ ಬಶೀರ್ ದಾವೂದ್ ಎಂಬವರಿಗೆ ಸೇರಿದ ಎಸ್.ಎಂ. ಫಿಶರೀಸ್ ಹೆಸರಿನ ಟ್ರಾಲ್‌ಬೋಟ್ ಸೆ.12ರಂದು ಮಂಗಳೂರಿನ ಹಳೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೆ ಶುಕ್ರವಾರ ಕಾಪು ದಾಟುತ್ತಿದ್ದಂತೆ ಬೋಟ್ ಒಳಗೆ ನೀರು ನುಗ್ಗಿ ಮುಳುಗಡೆಯಾಗಿದೆ. ಈ ಸಂದರ್ಭ ಬೋಟ್‌ನಲ್ಲಿ 9 ಮಂದಿ ತಮಿಳು ಮೀನುಗಾರರಿದ್ದರು. ಅಲ್ಲೇ ಇದ್ದ ಇತರ ಬೋಟ್‌ನಲ್ಲಿರುವ ಮೀನುಗಾರರು ಇವರನ್ನು ರಕ್ಷಣೆ ಮಾಡಿದ್ದಾರೆ.

ಬೋಟ್ ಸಂಪೂರ್ಣ ಮುಳುಗಿ ಹೋಗಿದ್ದು ಸುಮಾರು 30 ಲಕ್ಷ ರೂ. ನಷ್ಟ ಸಂಭವಿಸಿದೆ. ಈ ಕುರಿತು ಕರಾವಳಿ ಕಾವಲು ಪಡೆ, ಮೀನುಗಾರಿಕಾ ನಿರ್ದೇಶಕರು, ಟ್ರಾಲ್ ಬೋಟ್ ಮೀನುಗಾರರ ಸಂಘಕ್ಕೆ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News